ರಾಯ್ಬರೇಲಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ಮದ್ಯಪ್ರಿಯ ಮಂಗವೊಂದು ಮದ್ಯ ಮಾರಾಟಗಾರರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಅಲ್ಲದೇ, ಈ ಮದ್ಯ ಪ್ರಿಯ ಕೋತಿ ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಲಖನೌ - ಕಾನ್ಪುರ ರಸ್ತೆಯಲ್ಲಿರುವ ನವಾಬ್‌ಗಂಜ್ ಪ್ರದೇಶದಲ್ಲಿ ಕುಡುಕ ಕೋತಿಯ ಉಪಟಳಕ್ಕೆ ಮದ್ಯದ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಬೇಸತ್ತು ಹೋಗುವಂತೆ ಆಗಿದೆ. ಮದ್ಯದ ಮಾರಾಟ ಮಳಿಗೆಯಲ್ಲಿ ಕೋತಿ ಶಾಶ್ವತ ಗ್ರಾಹಕನೇ ಆಗಿ ಬಿಟ್ಟಿದೆ.
ಕುಡುಕ ಕೋತಿಯ ಕಾಟಕ್ಕೆ ಬೇಸತ್ತ ಮದ್ಯದ ಅಂಗಡಿ ಮಾಲೀಕರು ನಿರಂತರ ಮದ್ಯದ ಚಟ ಹೊಂದಿರುವ ಈ ಕೋತಿ, ಮದ್ಯದಂಗಡಿಗಳಿಗೆ ನುಗ್ಗಿ ಮದ್ಯ ಸೇವಿಸಿ ಬಿಡುತ್ತದೆ. ಈ ಅಂಗಡಿಗಳಲ್ಲಿ ಮದ್ಯ ಖರೀದಿಸುವವರ ಕೈಗೆ ಕೈ ಹಾಕಿ ಹಾಕಿ ಮಂಗವು ಮದ್ಯದ ಬಾಟಲಿಗಳನ್ನು ಕಸಿದುಕೊಳ್ಳುತ್ತದೆ. ಓಡಿಸಲು ಪ್ರಯತ್ನಿಸಿದರೆ ಮನುಷ್ಯರ ಮೇಲೆಯೇ ಈ ಕೋತಿ ದಾಳಿ ಮಾಡುತ್ತದೆ ಎಂದು ಮದ್ಯದ ಅಂಗಡಿ ಮಾಲೀಕರು ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಅಬಕಾರಿ ಅಧಿಕಾರಿ ರಾಜೇಂದ್ರ ಪ್ರತಾಪ್ ಸಿಂಗ್, ಅರಣ್ಯ ಇಲಾಖೆಯ ನೆರವಿನಿಂದ ಈ ಕೋತಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಿಂಚಿನ ವೇಗದಲ್ಲಿ ಕಾಡು ಹಂದಿ ಬೇಟೆಯಾಡಿದ ಹುಲಿ: ವಿಡಿಯೋ ವೈರಲ್