ಕಣ್ಣೂರು (ಕೇರಳ):ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ. ನಿನ್ನೆ (ಗುರುವಾರ) ರಾತ್ರಿ 11:45 ಕ್ಕೆ ಪ್ರಯಾಣ ಮುಗಿಸಿದ ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ರಾತ್ರಿ 1.25ಕ್ಕೆ ಬೆಂಕಿ ಕಾಣಿಸಿಕೊಂಡಿತು. ರೈಲಿನ ಕೊನೆಯ ಮೂರು ಬೋಗಿಗಳಿಗೆ ಬೆಂಕಿ ವ್ಯಾಪಿಸಿ, ಸಂಪೂರ್ಣ ಸುಟ್ಟು ಕರಕಲಾಗಿದೆ. ಇತ್ತೀಚೆಗೆ ಇದೇ ರೈಲಿಗೆ ಎಲತ್ತೂರಿನಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣ ಮಾಸುವ ಮುನ್ನವೇ ಮತ್ತೆ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲಿನ ಇಂಜಿನ್‌ನಿಂದ ಮೂರನೇ ಕೋಚ್‌ವರೆಗೆ ಬೆಂಕಿ ಕಾಣಿಸಿಕೊಂಡಿದ್ದು, ಇತರ ಎರಡು ಬೋಗಿಗಳಿಗೂ ವ್ಯಾಪಿಸಿದೆ. ಘಟನೆಯಲ್ಲಿ ರೈಲಿನ ಎಲ್ಲ ಮೂರು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಪಾಲಕ್ಕಾಡ್‌ನಿಂದ ಬಂದ ದಕ್ಷಿಣ ರೈಲ್ವೆಯ ಎಂಡಿ ಎಂ.ಆರ್.ಜಾಕೀರ್ ಹುಸೇನ್ ನೇತೃತ್ವದ ತಂಡ ಸುಟ್ಟ ಬೋಗಿಗಳನ್ನು ಪರಿಶೀಲಿಸಿದೆ. ತನಿಖೆಯ ನಂತರವೇ ಹೆಚ್ಚಿನ ವಿಷಯಗಳನ್ನು ಹೇಳಲು ಸಾಧ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಘಟನೆಯ ಕುರಿತು ಕೇರಳ ಪೊಲೀಸರು ಮತ್ತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಯೋಜಿತವಾಗಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಮೀಪದಲ್ಲೇ ಸಿಗಬಹುದಾದ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆಯ ವೇಳೆ ರೈಲಿನಲ್ಲಿ ಯಾರಾದ್ರೂ ಇದ್ದರಾ, ಉದ್ದೇಶಪೂರ್ವಕವಾಗಿ ಅಪರಾಧ ಎಸಗಿದ್ದಾರಾ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.