ನವದೆಹಲಿ: ಭಾರತದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದಾಗಿ ಅಲ್ ಖೈದಾ ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿದೆ. ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಹುತಿ ಮಾಡಿಕೊಳ್ಳಲು ಸಿದ್ಧ ಎಂದು ಅಲ್ ಖೈದಾ ಜೂ.6 ರಂದು ಹೊರಡಿಸಿದ ತನ್ನ ಅಧಿಕೃತ ಪತ್ರದಲ್ಲಿ ತಿಳಿಸಿದೆ.
ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳ ಹಿಂದೆ ಸುದ್ದಿ ವಾಹಿನಿಯ ಸಂವಾದ ಒಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಪ್ರವಾದಿಯ ಗೌರವಕ್ಕಾಗಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಹೇಳಿದೆ. ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲಲು ಬಯಸುತ್ತೇವೆ. ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮ ದೇಹ, ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ. ಅಂತವರು ಈಗ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮುಂಬೈನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನೂಪುರ್ ಶರ್ಮಾ ಅವರ ಹೇಳಿಕೆಗಳು ಜಗತ್ತಿನಾದ್ಯಂತ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿವೆ. ಯಾವುದೇ ಕ್ಷಮೆ ಇರುವುದಿಲ್ಲ. ಈ ವಿಷಯವನ್ನು ಯಾವುದೇ ಖಂಡನೆ ಅಥವಾ ದುಃಖದ ಪದದಿಂದ ಮುಚ್ಚಲಾಗುವುದಿಲ್ಲ. ಮುಂದೆ ನಾವು ಪ್ರವಾದಿಯವರ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅಲ್ ಖೈದಾ ಹೇಳಿದೆ.