ಲಖನೌ:ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಲಖನೌ ಮತ್ತು ರಾಜ್ಯದ ಇತರೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ ಸೇರಿದಂತೆ ಇತರೆ ಭಯೋತ್ಪಾದಕ ಕೃತ್ಯ ನಡೆಸಲು ಇವರು ಯೋಜಿಸಿದ್ದರು ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.
ಲಖನೌ ಜಿಲ್ಲೆಯ ನಿವಾಸಿಗಳಾದ ಮಿನ್ಹಾಜ್ ಅಹ್ಮದ್ ಅಲಿಯಾಜ್ ಮುಶಿರ್ ಮತ್ತು ಮಸೀರುದ್ದೀನ್ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರು. ಇವರನ್ನು ಬಂಧಿಸುವ ಮೂಲಕ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಉತ್ತರ ಪ್ರದೇಶದ ದೊಡ್ಡ ಭಯೋತ್ಪಾದಕ ಜಾಲವನ್ನು ಭೇದಿಸಿದೆ. ಬಂಧಿತ ಭಯೋತ್ಪಾದಕರು ಅಲ್ ಖೈದಾದ ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಭಯೋತ್ಪಾದಕರಿಗಾಗಿ ಶೋಧಕಾರ್ಯ ನಡೆಸುವ ವೇಳೆ ಭಾರೀ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. "ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ಪೇಶಾವರ್ ಮತ್ತು ಕ್ವೆಟ್ಟಾದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ" ಎಂದು ಪೊಲೀಸರು ಹೇಳಿದ್ರು.
ಲಖನೌ ಜಿಲ್ಲೆಯ ಕಾಕೋರಿ ಪಟ್ಟಣದಲ್ಲಿ ವಾಸವಿರುವ ಮಿನ್ಹಾಜ್ ಅಹ್ಮದ್(30) ಮನೆಯಲ್ಲಿ ಸ್ಫೋಟಕ ಮತ್ತು ಪಿಸ್ತೂಲ್ ಪತ್ತೆಯಾಗಿದೆ. ಮತ್ತೊಂದು ಭಯೋತ್ಪಾದಕ ಚಟುವಟಿಕೆ ಜೌನ್‌ಪುರ ಜಿಲ್ಲೆಯ ಮರಿಯಾಹು ಪಟ್ಟಣದಲ್ಲಿ ವಾಸವಿರುವ ಮಸೀರುದ್ದೀನ್(50) ಮನೆಯಲ್ಲಿ ನಡೆಯುತ್ತಿದ್ದದ್ದು ಪತ್ತೆಯಾಗಿದ್ದು, ಇಲ್ಲಿ ದಾಳಿ ನಡೆಸಿದಾಗ ಭಾರೀ ಪ್ರಮಾಣದ ಸ್ಫೋಟಕಗಳು ಮತ್ತು ಕುಕ್ಕರ್ ಸೆಟ್ ಅನ್ನು ಕಚ್ಚಾ ಬಾಂಬ್‌ನಂತೆ ಬಳಸಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆಗಳು ನಡೆದಿವೆ.
ಪೊಲೀಸರಿಗೆ ದೊರೆತಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಮಾರಕಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಲಾಗಿತ್ತು ಎನ್ನಲಾಗಿದೆ.