ಕಾಸರಗೋಡು:ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕೆಲವು ಗ್ರಾಮಗಳ ಹೆಸರುಗಳನ್ನು ಕನ್ನಡದಿಂದ ಮಲಯಾಳಂಗೆ ಬದಲಿಸಲು ಕೇರಳ ಸರ್ಕಾರ ಆದೇಶಿಸಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಕಚೇರಿ, ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದ ಯಾವುದೇ ಸುತ್ತೋಲೆ ಕೇರಳ ಸರ್ಕಾರ ಹೊರಡಿಸಿಲ್ಲ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಪಡಿತರ ಕಾರ್ಡ್‌ಗಳಲ್ಲಿ ಸಾಫ್ಟ್‌ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ದೋಷದಿಂದಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ, ಕಾಸರಗೋಡಿನ ಯಾವುದೇ ಪ್ರದೇಶದ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಬದಲಾಯಿಸುವ ಆದೇಶ ಬಂದರೆ ಆಗ ಅದರ ವಿರುದ್ಧ ಹೋರಾಟದ ನೇತೃತ್ವವನ್ನು ಖುದ್ದು ತಾವೇ ವಹಿಸುವುದಾಗಿ ಅಶ್ರಫ್ ಭರವಸೆ ನೀಡಿದ್ದಾರೆ.