ಟಿಕಮ್ಗಢ(ಮಧ್ಯಪ್ರದೇಶ): ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಮತಬೇಟೆಯಲ್ಲಿ ತೊಡಗಿವೆ. ಈ ನಡುವೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನನಗೆ ಮೋಸ ಮಾಡಿದೆ. ಆ ಪಕ್ಷಕ್ಕೆ ಯಾರೂ ಮತ ಹಾಕಬೇಡಿ. ಇದು ಬಹಳ ಕುತಂತ್ರಿ ಪಕ್ಷ ಎಂದು ಟೀಕಿಸಿದ್ದಾರೆ.
ಟಿಕಮ್ಗಢದ ಜತಾರಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜಾತಿ ಗಣತಿಗೆ ಬೆಂಬಲ ನೀಡುತ್ತಿದೆ. ಜಾತಿ ಆಧಾರಿತವಾಗಿ ಮತಗಳನ್ನು ಸೆಳೆಯಲು ಅವರು ಮುಂದಾಗಿದ್ದಾರೆ. ಇದರೊಂದಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೂ ಜಾತಿ ಆಧಾರಿತ ಜನಗಣತಿಗೆ ಬೆಂಬಲ ಸೂಚಿಸುತ್ತದೆ. ಬಿಜೆಪಿ ಕೂಡ ಈ ರೀತಿ ಮತದಾರರನ್ನು ಸೆಳೆಯಲು ಮುಂದಾಗಿದೆ ಎಂದರು.
ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದ ಅಖಿಲೇಶ್, ಮಧ್ಯಪ್ರದೇಶದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿ ಆಗಿಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಉಚಿತ ಪಡಿತರ ವಿಚಾರವಾಗಿ ಮಾತನಾಡಿ, ನಿಮಗೆ ಉಚಿತ ಪಡಿತರ ಸಿಗುತ್ತಿಲ್ಲ ಎಂದಾದರೆ ಬಿಜೆಪಿ ಏಕೆ ಮತ ಹಾಕಬೇಕು?. ಬಿಜೆಪಿಯದ್ದು ಲೋಕ ತಾಂತ್ರಿಕ ಸರ್ಕಾರ ಅಲ್ಲ, ಲೂಟ್ ತಾಂತ್ರಿಕ ಸರ್ಕಾರ ಎಂದು ಟೀಕಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು ಮೂರು ದಿನಗಳ ಕಾಲ ಮಧ್ಯಪ್ರದೇಶದ ಚುನಾವಣಾ ಪ್ರಚಾರ ರ್ಯಾಲಿ ಭಾಗವಹಿಸುತ್ತಿದ್ದಾರೆ. ಸಮಾಜವಾದಿ ಪಕ್ಷವು ಇಂಡಿಯಾ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರೊಂದಿಗೆ ಸಮಾಜವಾದಿ ಪಕ್ಷವು ಒಟ್ಟು 72 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಡುವಿನ ಕಿತ್ತಾಟದ ನಡುವೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ವಿರುದ್ಧ ಅಖಿಲೇಶ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್ನ ಸಣ್ಣಪುಟ್ಟ ನಾಯಕರು ನಮ್ಮ ಬಗ್ಗೆ ಮಾತನಾಡಲು ಬರಬೇಡಿ. ಬಿಜೆಪಿಯನ್ನು ಎದುರಿಸಲು 'ಇಂಡಿಯಾ' ಒಕ್ಕೂಟವನ್ನು ಕೇಂದ್ರ ಅಥವಾ ರಾಜ್ಯ ಮಟ್ಟಕ್ಕೆ ಸೀಮಿತವಾಗಿ ರೂಪಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರುತ್ತೇನೆ. ನಮಗೆ ಸೀಟು ಹಂಚಿಕೆಗೆ ಮಾಡಲು ಬಿಡದಿದ್ದರೆ ಮೊದಲೇ ಹೇಳಬೇಕಿತ್ತು ಎಂದು ಒಕ್ಕೂಟದ ವಿರುದ್ಧವೇ ಹೌಹಾರಿದರು. ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಇಂಡಿಯಾ ಒಕ್ಕೂಟವು ಕೇವಲ ಲೋಕಸಭೆ ಚುನಾವಣೆ ಸಂಬಂಧ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಈ ರೀತಿ ಮಾಡಿದರೆ ಅವರ ಜೊತೆ ಇನ್ನಾರು ನಿಲ್ಲುತ್ತಾರೆ? ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜಯ್ ರೈ, ಮಧ್ಯಪ್ರದೇಶದ ಸ್ಥಿತಿಗತಿ ಬಗ್ಗೆ ಸಮಾಜವಾದಿ ಪಕ್ಷ ಅರಿತುಕೊಳ್ಳಬೇಕು. ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಆದ್ದರಿಂದ ಸಮಾಜವಾದಿ ಪಕ್ಷವು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಬಿಹಾರದ ಪಾಟ್ನಾದಲ್ಲಿ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪಾಟ್ನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಬಿಜೆಪಿ ಹಟಾವೋ, ದೇಶ್ ಬಚಾವೋ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹೋರಾಡಲು ನಾವು ಇಂಡಿಯಾ ಒಕ್ಕೂಟವನ್ನು ರಚಿಸಿದ್ದೇವೆ. ಆದರೆ ಇದನ್ನು ಬಲಪಡಿಸುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿಲ್ಲ. ಆದರೆ ಇಂಡಿಯಾ ಒಕ್ಕೂಟವು ದೇಶಕ್ಕಾಗಿ ಹೋರಾಟ ಮಾಡುವುದನ್ನು ನಿಲ್ಲಿಸುವುದಿಲ್ಲ. ಪಂಚರಾಜ್ಯಗಳ ಚುನಾವಣೆ ನಂತರ ಮೈತ್ರಿ ಇನ್ನಷ್ಟು ಬಲಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯಪ್ರದೇಶ ಚುನಾವಣೆ ನವೆಂಬರ್ 17ಕ್ಕೆ ನಡೆಯಲಿದೆ. ಡಿಸೆಂಬರ್ 3ರಂದು ಮತಎಣಿಕೆ ನಡೆಯಲಿದೆ. ರಾಜಸ್ಥಾನ, ಛತ್ತೀಸ್ಗಢ, ಮಿಜೋರಾಂ ಹಾಗು ತೆಲಂಗಾಣ ರಾಜ್ಯಗಳೂ ಕೂಡಾ ಚುನಾವಣೆಗೆ ಸಜ್ಜಾಗುತ್ತಿವೆ.
ಇದನ್ನೂ ಓದಿ:ದೇಶದಲ್ಲಿ ರಾಮರಾಜ್ಯಕ್ಕೆ ರಾಮಮಂದಿರ ನಾಂದಿ: ಯೋಗಿ ಆದಿತ್ಯನಾಥ್