ಔರಂಗಾಬಾದ್(ಮಹಾರಾಷ್ಟ್ರ) :ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿರುದ್ಧ ಸಮರ ಸಾರಿರುವ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ವಿರುದ್ಧ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಮನೆಯಿಂದಲೇ(ಶಿವಸೇನೆ) ಹೊರಹಾಕಲ್ಪಟ್ಟ ವ್ಯಕ್ತಿಗೆ ಹೆಚ್ಚು ಮನ್ನಣೆ ಕೊಡಬಾರದು. ಅವರ ಮಾತುಗಳನ್ನು ನಿರ್ಲಕ್ಷಿಸಿ ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಓವೈಸಿ, ತಾನು ಯಾರಿಗೂ ಹೆದರುವುದಿಲ್ಲ. ನಮ್ಮ ಸಮಾಜ(ಮುಸ್ಲಿಂ) ಯಾರ ಬಲೆಗೂ ಬೀಳಬಾರದು. ಕೆಲವರು ನಮ್ಮ ವಿರುದ್ಧ ಟೀಕೆ ಮಾಡುತ್ತಾರೆ. ಅವರನ್ನು ಟೀಕಿಸಲು ಬಿಡಿ. ಅವರ ಮಾತುಗಳನ್ನು ಕೇಳಿಸಿಕೊಳ್ಳದೇ ನಮ್ಮ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
2005ರಲ್ಲಿ ಶಿವಸೇನೆ ತೊರೆದು ನಂತರ ಎಂಎನ್ಎಸ್ ಪಕ್ಷ ಕಟ್ಟಿದ ರಾಜ್ ಠಾಕ್ರೆ, ಇದೇ ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿರುದ್ಧ ಟೀಕಿಸಿದ್ದರು. ಅವುಗಳನ್ನು ತೆಗೆದು ಹಾಕಲು ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದರು. ಮಸೀದಿಗಳ ಮೇಲಿನ ಧ್ವನಿವರ್ಧಕಗಳು ಸಾಮಾಜಿಕ ಸಮಸ್ಯೆ ಸೃಷ್ಟಿಸುತ್ತಿವೆ. ಧಾರ್ಮಿಕ ವಿಷಯಕ್ಕಾಗಿ ಅವುಗಳನ್ನು ಕೀಳಲು ನಾನು ಕರೆ ನೀಡಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದರು.