ಚೆನ್ನೈ, ತಮಿಳುನಾಡು:ಕೇಂದ್ರ ಮಾದಕ ವಸ್ತು ನಿಗ್ರಹ ದಳ ವಿಭಾಗದ ಅಧಿಕಾರಿಗಳು ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಎಕೆ-47 ಹೊಂದಿದ್ದ ಶ್ರೀಲಂಕಾ ಪ್ರಜೆಗಳನ್ನು ಆರು ಮಂದಿಯನ್ನು ಬಂಧಿಸಿದ್ದು, ಅವರು ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಭಾರತೀಯ ಕರಾವಳಿಯಲ್ಲಿ ಮಾದಕ ವಸ್ತು ಮತ್ತು ಶಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ, ಭಾರತೀಯ ಕೋಸ್ಟ್ ಗಾರ್ಡ್ಗಳು ಮತ್ತು ಕೇಂದ್ರ ಮಾದಕವಸ್ತು ನಿಗ್ರಹದಳಕ್ಕೆ ಬಂದಿತ್ತು. ಈ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ:ಕೊರೊನಾಘಾತಕ್ಕೆ ಸಿಲುಕಿದ್ದ ಭಾರತದ ಜಿಡಿಪಿ ಅದ್ಭುತವಾಗಿ ಮೇಲೆದ್ದು ಬಂದಿದೆ: ವಿಶ್ವ ಬ್ಯಾಂಕ್
ಕೇರಳದ ವಿಝಿನ್ಜಂ ಪ್ರದೇಶದಲ್ಲಿ ಶ್ರೀಲಂಕಾಗೆ ಸೇರಿದ ಬೋಟ್ನಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, 300 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಲಾಗಿದೆ. ಹೆರಾಯಿನ್ ಅನ್ನು ವಾಟರ್ ಟ್ಯಾಂಕ್ನಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು.
ಇದರ ಜೊತೆಗೆ 5 ಎಕೆ-47 ರೈಫಲ್ಗಳು ಮತ್ತು 9ಎಂಎಂ ಬುಲೆಟ್ಗಳನ್ನು ಬೋಟ್ನಲ್ಲಿದ್ದವರಿಂದ ಜಪ್ತಿ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ದಾಖಲೆಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.
ನಂದನ, ದಶಪ್ರಿಯ, ಗುನಶೇಖರ, ರಾಣಾ ಸಿಂಗ, ನಿಶಾಂಕ್ ಎಂಬುವವರನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ನಂತರವೇ ಆರೋಪಿಗಳು ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದವರೆಂದು ತಿಳಿದುಬಂದಿದೆ.