ಅಮೃತಸರ (ಪಂಜಾಬ್): ಪಂಜಾಬ್‌ನ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಖಲಿಸ್ತಾನ್ ನಾಯಕ ಮತ್ತು ವಾರಿಸ್ ಪಂಜಾಬ್ ಡೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿದೆ. ಕೆಲವು ದಿನಗಳ ಹಿಂದೆ, ಈ ಗುಂಪಿನ ಸಹ ನಾಯಕ ಲವ್‌ಪ್ರೀತ್ ಸಿಂಗ್ ತೂಫಾನ್ ಬಂಧನದ ವಿರುದ್ಧ ಅಜ್ನಾಲಾದಲ್ಲಿ ಖಲಿಸ್ತಾನಿ ತೀವ್ರಗಾಮಿಗಳು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಇದರಿಂದ ಪಂಜಾಬ್ ಪೊಲೀಸರು, ತೀವ್ರಗಾಮಿ ಸಿಖ್ ನಾಯಕ ಅಮೃತಪಾಲ್ ಸಿಂಗ್ ಅವರ ಒಂಬತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಅಜ್ನಾಲಾ ಘರ್ಷಣೆ?:ತಮ್ಮ ಸಹ ನಾಯಕ ಲವ್‌ಪ್ರೀತ್ ಸಿಂಗ್ ತೂಫಾನ್ ಬಂಧನದ ವಿರುದ್ಧ ಖಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ವಾರಿಸ್ ಪಂಜಾಬ್ ಡಿ ಸದಸ್ಯರು ಮತ್ತು ಅಮೃತಸರ ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಗಳ ನಡೆದಿವೆ. ನಂತರ ಅಮೃತಪಾಲ್ ಸಿಂಗ್ ಅವರ ಸಹಾಯಕರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.
ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದ ಬೆಂಬಲಿಗರು: ವಾರಿಸ್ ಪಂಜಾಬ್ ಡೇ ಬೆಂಬಲಿಗರು ಫೆಬ್ರವರಿ 24ರಂದು ಪಂಜಾಬ್‌ನ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಇತ್ತೀಚೆಗೆ ಅಪಹರಣ ಪ್ರಕರಣದಲ್ಲಿ ಬಂಧಿತನಾದ ತೂಫಾನ್ ಅನ್ನು ಬಿಡುಗಡೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದರು. ಪೊಲೀಸರು ಮತ್ತು ತೀವ್ರಗಾಮಿ ಸಿಖ್ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು.
ಅಜ್ನಾಲಾ ಘಟನೆಯ ನಂತರ ನಡೆದ ವಿವಾದವೇನು?:ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷಗಳು, ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಗುರಿಯಾಗಿಸಿದ್ದವು. ಇದಾನಂತರ ಅಜ್ನಾಲಾ ಹಿಂಸಾತ್ಮಕ ಘರ್ಷಣೆಗಳಿಂದ ಅಮೃತಪಾಲ್ ಬೆಳಕಿಗೆ ಬಂದಿದ್ದಾನೆ. ವಾರಿಸ್ ಪಂಜಾಬ್ ಡೇ ಮತ್ತು ಅಮೃತಪಾಲ್ ಪಾಕಿಸ್ತಾನದ ಐಎಸ್‌ಐನೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.