ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷವಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ತಾವು ಬಿಜೆಪಿ ಸೇರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಎನ್‌ಸಿಪಿಯಲ್ಲೇ ಇರುವುದಾಗಿ ಮತ್ತು ಪಕ್ಷದ ಸೂಚನೆಯಂತೆ ನಡೆದುಕೊಳ್ಳುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರಾದ ಚಿಕ್ಕಪ್ಪ ಶರದ್ ಪವಾರ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಅಜಿತ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿತ್ತು. ಮತ್ತೊಂದೆಡೆ, ಇಂದು ಬೆಳಿಗ್ಗೆ ಎನ್‌ಸಿಪಿ ಸಂಸದೆ, ಸಹೋದರಿ ಸಂಸದೆ ಸುಪ್ರಿಯಾ ಸುಳೆ, ''ಮುಂದಿನ 15 ದಿನಗಳಲ್ಲಿ ಎರಡು ಪ್ರಮುಖ ಸ್ಫೋಟಗಳು ಸಂಭವಿಸಲಿದ್ದು, ಒಂದು ದೆಹಲಿಯಲ್ಲಿ ಮತ್ತೊಂದು ಮಹಾರಾಷ್ಟ್ರದಲ್ಲಿ" ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಮತ್ತಷ್ಟು ಸಂಚಲನ ಹಾಗೂ ಕುತೂಹಲಕ್ಕೂ ಕಾರಣವಾಗಿತ್ತು.