ಪುಣೆ (ಮಹಾರಾಷ್ಟ್ರ):ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪುಣೆಯ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಉನ್ನತ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಯೋಜನೆಗಳ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಂತಾಗಿದೆ. ಮಿತ್ರಪಕ್ಷ ಎನ್‌ಸಿಪಿಯಲ್ಲಿ ಬಿರುಕು ಮೂಡುವ ಸಾಧ್ಯತೆಯನ್ನು ಶಿವಸೇನೆ(ಯುಬಿಟಿ) ಮತ್ತೊಮ್ಮೆ ತಳ್ಳಿಹಾಕಿದೆ. ಏಕನಾಥ್ ಶಿಂಧೆ ನೇತೃತ್ವದ ಸೇನೆಯು ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸಿದರೆ, ಅದು ರಾಜ್ಯ ಸರ್ಕಾರವನ್ನು ಬಲಪಡಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಂಜಯ್ ರಾವುತ್ ಹೇಳಿದ್ದೇನು?: ''ಭಾನುವಾರ ನಾಗ್ಪುರದಲ್ಲಿ ನಡೆದ ಎಂವಿಎ (ಮಹಾ ವಿಕಾಸ್ ಅಘಾಡಿ) ರ‍್ಯಾಲಿಯಲ್ಲಿ ಅಜಿತ್ ಪವಾರ್ ನಮ್ಮೊಂದಿಗಿದ್ದರು. ಅವರು ಉನ್ನತ ಎಂವಿಎ ನಾಯಕರೊಂದಿಗೆ ವೇದಿಕೆ ಹಂಚಿಕೊಂಡರು. ನಾವು ಅದೇ ವಿಮಾನದಲ್ಲಿ ಹಿಂದಿರುಗಿದ್ದೆವು ಮತ್ತು (ಎನ್‌ಸಿಪಿಯಿಂದ ಅವರ ವಿಭಜನೆಯ ಕುರಿತು) ಹರಡಿರುವ ವದಂತಿಗಳ ಬಗ್ಗೆಯೂ ಮಾತನಾಡಿದೆವು. ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ತಮ್ಮ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ" ಎಂದು ರಾವುತ್ ಹೇಳಿದರು.
ಎಂವಿಎ ರ‍್ಯಾಲಿಯ ನಂತರ ಅದರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಿತ್ ಪವಾರ್, ನನ್ನ ಬಗೆಗಿನ ಸುದ್ದಿ ಕೇಳಿ ನಕ್ಕು ಸುಮ್ಮನಾದೆ ಎಂದರು. ಭಾನುವಾರ ಮುಂಬೈನಲ್ಲಿ ಸಂಭವಿಸಿದ ಅಗ್ನಿ ದುರಂತದ ಕಾರಣದಿಂದ ಅವರು, ಸೋಮವಾರ ಪುಣೆಯಲ್ಲಿ ನಡೆಯಬೇಕಿದ್ದ ತಮ್ಮ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಶೇಕರ್ ಬವಾಂಕುಲೆ ಮತ್ತು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೇಲಾರ್ ಸೋಮವಾರ ದೆಹಲಿಗೆ ತೆರಳಿದರು. ''ಆಡಳಿತಾತ್ಮಕ ಕೆಲಸ" ಮತ್ತು "ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂಬ ಕಾರಣಕ್ಕಾಗಿ ಭೇಟಿ ಮಾಡಲಾಗಿದೆ ಎಂದು ಬವಾಂಕುಲೆ ಸುದ್ದಿಗಾರರಿಗೆ ತಿಳಿಸಿದರು.