ನವದೆಹಲಿ: ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎಸ್ಐಟಿ ಇದೀಗ ವರದಿ ಬಹಿರಂಗಗೊಳಿಸಿದ್ದು, ಇದೊಂದು ಯೋಜಿತ ಪಿತೂರಿ ಎಂಬ ಮಾಹಿತಿ ಹೊರಹಾಕಿದೆ. ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚುತ್ತಿದ್ದು, ಇದರ ನಡುವೆಯೇ ಇಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಇಲಾಖೆ ಸಂಬಂಧಿತ ಸಭೆ ನಡೆಸಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯವನ್ನು ಬೆಳಗ್ಗೆ 10.15 ರ ಸುಮಾರಿಗೆ ತಲುಪಿ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡ ನಂತರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತಮ್ಮ ಪುತ್ರ ಆಶಿಶ್ ಮಿಶ್ರಾ ಜೈಲು ಸೇರಿದ ಒಂದು ದಿನದ ನಂತರ ಸಚಿವರು ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಲು ಲಖೀಂಪುರ ಖೇರಿಗೆ ಭೇಟಿ ನೀಡಿದರು. ಕಾರ್ಯಕ್ರಮದ ನಂತರ ವರದಿಗಾರನೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿಗಾರನೊಂದಿಗೆ ಅಸಭ್ಯ ವರ್ತನೆ:
ಸಚಿವ ಅಜಯ್ ಮಿಶ್ರಾ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದರು. ಕಾರ್ಯಕ್ರಮ ಮುಕ್ತಾಯದ ಬಳಿಕ ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ, ಕೋಪಗೊಂಡಿರುವ ಸಚಿವರು ಪತ್ರಕರ್ತನೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದು, ಆತನನ್ನು ತಳ್ಳಲು ಮುಂದಾಗಿದ್ದಾರೆ. ಜೊತೆಗೆ ಮೊಬೈಲ್ ಸ್ವಿಚ್ಡ್ ಆಫ್ ಮಾಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಇದೀಗ ವೈರಲ್ ಆಗಿವೆ.