ಬೆಂಗಳೂರು: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿಯಾಗಿರುವ ಡಿಸ್ಕವರಿ ಚಾನೆಲ್ನಲ್ಲಿ ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿ ಈ ಹಿಂದೆ ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ಮೋದಿ, ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಕಾಣಿಸಿದ್ದರು. ಈಗ ಬಾಲಿವುಡ್ನ ಸೂಪರ್ ಕಾಪ್ ಎಂದೇ ಪ್ರಸಿದ್ದಿಯಾಗಿರುವ ಅಜಯ್ ದೇವಗನ್ ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಅಜಯ್ ದೇವಗನ್ ಅಜಯ್ ದೇವಗನ್ ಕಾಣಿಸಿಕೊಂಡ ಈ ಶೋವನ್ನ ಹಿಂದೂ ಮಹಾಸಾಗರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಹು ನಿರೀಕ್ಷಿತ ಈ ಶೋದ ಟ್ರೈಲರ್ನ ಬಿಡುಗಡೆ ಮಾಡಲಾಗಿದೆ. ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ರ ಸಾಹಸ ದೃಶ್ಯ ಎಲ್ಲರ ಕುತೂಹಲ ಕೆರಳಿಸಿದೆ.
ಅ.22ರಂದು ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ಈ ಶೋ ಪ್ರಸಾರವಾಗಲಿದೆ. ಅ.25ರಂದು ಡಿಸ್ಕವರಿ ಚಾನೆಲ್ ಸೇರಿ ಸುಮಾರು 14 ಚಾನೆಲ್‌ಗಳಲ್ಲಿ ಈ ಸಂಚಿಕೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಒಟ್ಟು 142 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಡಿಸ್ಕವರಿ ಇಂಕ್‌ನ ದಕ್ಷಿಣ ಏಷ್ಯಾದ ನಿರ್ದೇಶಕರು ತಿಳಿಸಿದ್ದಾರೆ.
ಸಂಚಿಕೆಯ ಚಿತ್ರೀಕರಣದ ಅನುಭವದ ಬಗ್ಗೆ ಮಾತನಾಡಿದ ಅಜಯ್ ದೇವಗನ್, ನನಗೆ ದಟ್ಟ ಕಾಡು, ಸಮುದ್ರ, ನೀರು ತುಂಬಿದ ಪ್ರದೇಶ ಎಲ್ಲವೂ ಹೊಸತು. ಇಲ್ಲಿ ಎಲ್ಲವೂ ಅನಿರೀಕ್ಷಿತವೇ ಆಗಿತ್ತು. ನಾನು ಬರಿಗೈಲಿ ಹೋಗಿದ್ದೆ. ಪ್ರತಿ ಕ್ಷಣವೂ ಅಚ್ಚರಿಯಿಂದ ಕೂಡಿತ್ತು. ಈ ಸಂಚಿಕೆಯನ್ನು ನಾನು ತುಂಬಾ ಖುಷಿಯಿಂದಲೆ ಮಾಡಿದ್ದು, ನನಗೆ ಬಹಳ ಸಂತೋಷ ನೀಡಿದೆ’ ಎಂದರು.
‘ಸಿನಿಮಾ, ಧಾರಾವಾಹಿಗಳ ತರ ಇಲ್ಲಿ ರಿಟೇಕ್‌ಗೆ ಅವಕಾಶವಿಲ್ಲ. ಏನಿದ್ದರೂ ಸಹಜವಾಗಿಯೇ ಚಿತ್ರೀಕರಿಸಬೇಕು. ಕೆಲವೊಮ್ಮೆ ನನಗೆ ಭಯವಾಗಿದ್ದೂ ಇದೆ. ಇಂಥ ಹೊಸ ಜಾಗಗಳಿಗೆ ಹೋಗಿ ಹೊಸ ವಿಷಯ ತಿಳಿದುಕೊಳ್ಳುವುದೂ ನನಗೆ ತುಂಬಾ ಇಷ್ಟ’ ಎಂದು ತಮ್ಮ ಅನುಭವ ತೆರೆದಿಟ್ಟರು.
ಇನ್ನು, ಖ್ಯಾತ ಬ್ರಿಟಿಷ್ ಸಾಹಸಿಗ, ನಿರೂಪಕ ಬೇರ್ ಗ್ರಿಲ್ಸ್ ಮಾತನಾಡಿ, ‘ಭಾರತ ಎಲ್ಲ ದೃಷ್ಟಿಯಿಂದಲೂ ವೈವಿಧ್ಯಮಯವಾದ ದೇಶ. ಇಲ್ಲಿ ಹವಾಮಾನ, ಆಹಾರ, ಸಂಸ್ಕೃತಿ ಭಿನ್ನವಾಗಿದೆ. ಹೀಗಾಗಿ, ನನ್ನ ಅನುಭವದಲ್ಲಿ ಭಾರತ ತುಂಬಾ ನೆನಪಿಟ್ಟುಕೊಳ್ಳುವ ಅದ್ಭುತ ದೇಶ. ಹಾಗೆ ನೋಡಿದರೆ ನಾನು ಕಾಡಿನೊಳಗೆ ಬಾಳುವುದಕ್ಕಿಂತ ನಗರದಲ್ಲಿಯೇ ಹೆಚ್ಚು ಕಷ್ಟ, ಸವಾಲುಗಳನ್ನು ಎದುರಿಸುತ್ತಾ ಬಾಳುತ್ತೇನೆ ಎಂದರು.