ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯ ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
"2019 ರಲ್ಲಿ ನನ್ನ ತಂಗಿಯ ಮದುವೆಯ ನಂತರ ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಇರಿಸಿದ್ದೆ, ಲಾಕರ್ ಅನ್ನು 2021ರಲ್ಲಿ ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಗಸ್ಟ್ 21, 2021 ರಂದು ಸಿಐಟಿ ನಗರದಲ್ಲಿರುವ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಇತರೆ ಸಾಮಗ್ರಿಗಳೊಂದಿಗೆ ತೆಗೆದುಕೊಂಡು ಹೋಗಲಾಗಿತ್ತು. ಬಳಿಕ, ಸೆಪ್ಟೆಂಬರ್ 2021 ರಲ್ಲಿ ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 2022ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಲಾಕರ್‌ನ ಕೀಗಳು ಮಾತ್ರ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ಉಳಿದಿವೆ. ಫೆಬ್ರವರಿ 10, 2023 ರಂದು ಲಾಕರ್ ತೆರೆದಾಗ ಆಭರಣಗಳು ಕಳ್ಳತನವಾಗಿರುವುದು ತಿಳಿದು ಬಂದಿದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಬಾಲಿವುಡ್‌ಗೆ ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್ ಪದಾರ್ಪಣೆ
"ನಾನು ಚಿನ್ನಾಭರಣಗಳು, ವಜ್ರ ಮತ್ತು ನವರತ್ನದ ಆಭರಣಗಳನ್ನು ಲಾಕರ್‌ನಲ್ಲಿ ಇಟ್ಟ ವಿಚಾರ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಗೊತ್ತಿತ್ತು. ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರೇ ಕಳ್ಳತನ ಮಾಡಿರಬಹುದು" ಎಂದು ಐಶ್ವರ್ಯಾ ರಜನಿಕಾಂತ್ ದೂರಿನಲ್ಲಿ ಈಶ್ವರಿ, ಲಕ್ಷ್ಮಿ ಮತ್ತು ಅವರ ಚಾಲಕ ವೆಂಕಟ್ ಹೆಸರು ನಮೂದಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.