ಮುಂಬೈ(ಮಹಾರಾಷ್ಟ್ರ) :ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ತಡೆಹಿಡಿದಿದ್ದ 303 ಭಾರತೀಯ ಪ್ರಯಾಣಿಕರಿದ್ದ ವಿಮಾನ ಕೊನೆಗೂ ಮುಂಬೈಗೆ ಬಂದಿಳಿದಿದೆ. ಮಂಗಳವಾರ ನಸುಕಿನ ಜಾವ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ಯಾರಿಸ್ ಬಳಿಯ ವ್ಯಾಟ್ರಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್‌ಬಸ್ A340 ವಿಮಾನವು ಮಂಗಳವಾರ ಮುಂಜಾನೆ 4 ಗಂಟೆಗೆ ಮುಂಬೈಗೆ ಬಂದಿಳಿಯಿತು. ಅವರವರ ಮನೆಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಅಪ್ರಾಪ್ತರು ಸೇರಿ 25 ಮಂದಿ ಇನ್ನೂ ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ನಾಲ್ಕು ದಿನ ಫ್ರಾನ್ಸ್‌ನಲ್ಲಿ ತಡೆ:ವಿಮಾನವು ದುಬೈನಿಂದ ನಿಕರಾಗುವಾಗೆ ಹೋಗುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಫ್ರಾನ್ಸ್ನ ವ್ಯಾಟ್ರಿ ವಿಮಾನದಲ್ಲಿ ಇಳಿಸಲಾಯಿತು. ವಿಮಾನದಲ್ಲಿ ಅಪ್ರಾಪ್ತರು ಸೇರಿ 303 ಜನರಿದ್ದಾರೆ ಎಂದು ಮಾಹಿತಿ ಪಡೆದು ಅಲ್ಲಿನ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದರು. ಇದರಿಂದ ನಾಲ್ಕು ದಿನ ವಿಮಾನವನ್ನು ತಡೆಹಿಡಿಯಲಾಗಿತ್ತು. ಫ್ರಾನ್ಸ್ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದ ಬಳಿಕ ಎಲ್ಲ ಪ್ರಯಾಣಿಕರ ಸಮೇತ ವಿಮಾನವನ್ನು ಭಾರತಕ್ಕೆ ಕಳುಹಿಸಲಾಗಿದೆ.
ಫ್ರೆಂಚ್ ಸರ್ಕಾರಕ್ಕೆ ಭಾರತ ಧನ್ಯವಾದ:ವಿಚಾರಣೆಯ ವೇಳೆ ಭಾರತೀಯ ಪ್ರಯಾಣಿಕರಿಗೆ ತಂಗಲು ವ್ಯವಸ್ಥೆ, ವಾಪಪಸ್ ಮನೆಗೆ ಬರಲು ಸೇರಿದಂತೆ ಸೌಕರ್ಯ ಒದಗಿಸಿಕೊಟ್ಟ ಫ್ರೆಂಚ್ ಸರ್ಕಾರಕ್ಕೆ ಭಾರತ ಸರ್ಕಾರ ಧನ್ಯವಾದ ಹೇಳಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಆತಿಥ್ಯ ಮತ್ತು ಭಾರತೀಯ ಪ್ರಯಾಣಿಕರು ಮನೆಗೆ ಮರಳಲು ತ್ವರಿತವಾಗಿ ಅವಕಾಶ ಮಾಡಿಕೊಟ್ಟ ಫ್ರಾನ್ಸ್ ಸರ್ಕಾರ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಧನ್ಯವಾದಗಳು. ನಾಗರಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಕಲ ನೆರವು ನೀಡಿದ ಫ್ರೆಂಚ್ ಅಧಿಕಾರಿಗಳ ಸಹಕಾರವನ್ನು ರಾಯಭಾರ ಕಚೇರಿ ಶ್ಲಾಘಿಸಿದೆ.
ಇದೇ ವೇಳೆ, ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅದರಲ್ಲಿ 11 ಅಪ್ರಾಪ್ತರು ಸೇರಿ 303 ಭಾರತೀಯ ಪ್ರಯಾಣಿಕರಿದ್ದರು. ಮಾನವ ಕಳ್ಳಸಾಗಣೆ ಶಂಕಿಸಿ ನ್ಯಾಯಾಂಗ ವಿಚಾರಣೆ ನಡೆಸಲಾಯಿತು. ಇಬ್ಬರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಯಿತು. ಬಳಿಕ ಬಿಡುಗಡೆ ಮಾಡಿ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಸೋಮವಾರ ಮಧ್ಯಾಹ್ನ 276 ಪ್ರಯಾಣಿಕರು ಭಾರತಕ್ಕೆ ಅದೇ ವಿಮಾನದಲ್ಲಿ ಪ್ರಯಾಣಿಸಿದರು. 25 ಮಂದಿ ಇಲ್ಲೇ ಇದ್ದಾರೆ ಎಂದು ಫ್ರೆಂಚ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಇದನ್ನೂ ಓದಿ:ಮಾನವ ಕಳ್ಳಸಾಗಣೆ ಆರೋಪಕ್ಕೆ ಸಿಗದ ಸಾಕ್ಷ್ಯ : ಕೆಲವೇ ಕ್ಷಣಗಳಲ್ಲಿ ಪ್ರಯಾಣ ಬೆಳಸಲಿರುವ 303 ಭಾರತೀಯರಿದ್ದ ವಿಮಾನ