ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿದ್ದ ವಿಮಾನವು ಮಂಗಳವಾರ ಸಂಜೆ ಮಧ್ಯಪ್ರದೇಶದ ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆದರೆ, ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವನ್ನು ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ ಮಾಹಿತಿ ನೀಡಿದ್ದಾರೆ. ಮುಂದಿನ ಪ್ರಯಾಣಕ್ಕಾಗಿ ವಿಮಾನವು ಟೇಕ್ ಆಫ್ ಆಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷ ಪಕ್ಷಗಳ ಎರಡು ದಿನಗಳ ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಭಾಗವಹಿಸಿದ್ದರು. ಇಂದು ಸಭೆ ಮುಗಿದ ಬಳಿಕ ಇಬ್ಬರು ಕೂಡ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕಿ ಶೋಭಾ ಓಜಾ ಪ್ರತಿಕ್ರಿಯಿಸಿದ್ದ, ವಿಮಾನದ ತುರ್ತು ಭೂಸ್ಪರ್ಶದ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ನಾವು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದರು.
ವಿಮಾನವು ಸುರಕ್ಷಿತವಾಗಿಯೇ ತುರ್ತು ಭೂಸ್ಪರ್ಶ ಮಾಡಿದೆ. ಕೆಲವು ನಾಯಕರು ವಿಮಾನ ನಿಲ್ದಾಣಕ್ಕೆ ದೌಡಾಯಿಸಿ ಸೋನಿಯಾ ಮತ್ತು ರಾಹುಲ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸಭೆ ಬಳಿಕ ಚಾರ್ಟರ್ಡ್ ವಿಮಾನದಲ್ಲಿ ಇಬ್ಬರೂ ದೆಹಲಿಗೆ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ:ಸೋನಿಯಾಗೆ ಇನ್ನಷ್ಟು ಹತ್ತಿರವಾದ ಮಮತಾ.. ''ಪ್ರತಿಪಕ್ಷಗಳ ಸಭೆ ಪ್ರಜಾಪ್ರಭುತ್ವಕ್ಕೆ ಉತ್ತಮ'': ಮಮತಾ ಬ್ಯಾನರ್ಜಿ
ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿ 26 ಪಕ್ಷಗಳು ಬೆಂಗಳೂರಿನಲ್ಲಿ ಸೋಮವಾರ ಹಾಗೂ ಮಂಗಳವಾರ ಸಭೆ ಸೇರಿದ್ದವು. ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಂಜಾಬ್ ಸಿಎಂ ಭಗವಂತ್ ಮಾನ್, ಎನ್ಸಿಪಿ ವರಿಷ್ಠ ಶರದ್ ಪವಾರ್, ಉದ್ದವ್ ಠಾಕ್ರೆ, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಸೀತಾರಾಮ್ ಯೆಚೂರಿ, ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಡಿ.ರಾಜಾ, ವೈಕೋ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.