ನವದೆಹಲಿ: ಗೋವಾ-ಮುಂಬೈ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿದ್ದರೆ, ಇತ್ತ ಇಂಡಿಗೊ ಕಳೆದ ಮೂರು ದಿನಗಳಲ್ಲಿ ಇಬ್ಬರು ಪ್ರಯಾಣಿಕರನ್ನು ಕೋವಿಡ್ ನಿಯಮ ಸಂಬಂಧ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ಘಟನೆ -1
ಪಿಪಿಇ ಕಿಟ್ ಧರಿಸಲು ನಿರಾಕರಿಸಿದ್ದಕ್ಕಾಗಿ ಏರ್‌ಏಷ್ಯಾ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದರೆ, ಇಂಡಿಗೊ ತನ್ನ ಎರಡು ಬೇರೆ ಬೇರೆ ವಿಮಾನಗಳ ಇಬ್ಬರು ಪ್ರಯಾಣಿಕರನ್ನು ಮಾಸ್ಕ್ ಧರಿಸಲು ನಿರಾಕರಿಸಿದ್ದಕ್ಕಾಗಿ ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಿದೆ.
ಡಿಜಿಸಿಎ ಖಡಕ್ ಎಚ್ಚರಿಕೆ
ಹಲವಾರು ಬಾರಿ ಕೋವಿಡ್ ನಿಯಮ ಪಾಲನೆ ಮಾಡಿ ಎಂದರೂ ಪ್ರಯಾಣಿಕರು ಅನುಸರಿಸುತ್ತಿಲ್ಲ ಯಾಕೆ? ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ವಿಮಾನಯಾನ ಸಂಸ್ಥೆಗಳನ್ನು ಕೇಳಿದ್ದಾರೆ.
ಘಟನೆ - 2
ಕ್ಯಾಬಿನ್ ಸಿಬ್ಬಂದಿ ಪದೇ ಪದೆ ಎಚ್ಚರಿಕೆ ನೀಡಿದ್ದರೂ ಅಲೈಯನ್ಸ್ ಏರ್ ನ ಜಮ್ಮು-ದೆಹಲಿ ವಿಮಾನದಲ್ಲಿ ಮಾಸ್ಕ್ ಸರಿಯಾಗಿ ಧರಿಸದ ಕಾರಣ ನಾಲ್ಕು ಪ್ರಯಾಣಿಕರನ್ನು ಮಂಗಳವಾರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿದ ನಂತರ ಈ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.
ಘಟನೆ -3
ಇಂಡಿಗೊದ ದೆಹಲಿ-ಗೋವಾ ವಿಮಾನದಲ್ಲಿ ಸೋಮವಾರ ಪ್ರಯಾಣಿಕರೊಬ್ಬರು ಪಿಪಿಇ ಗೌನ್ ಧರಿಸುವ ವಿಷಯದಲ್ಲಿ ಮೊದಲು ಗೊಂದಲ ಸೃಷ್ಟಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ನಂತರ ಕ್ಯಾಬಿನ್ ಸಿಬ್ಬಂದಿ ಪದೇ ಪದೆ ಎಚ್ಚರಿಕೆ ನೀಡಿದರೂ ಕೂಡ ಅವರು ಹಾರಾಟದ ಸಮಯದಲ್ಲಿ ಮಾಸ್ಕ್ ತೆಗೆಯುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ವಿಮಾನವು ಗೋವಾಕ್ಕೆ ಬಂದಿಳಿದ ನಂತರ ಸಿಬ್ಬಂದಿ ಅವರನ್ನು ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಘಟನೆ -4
ಇಂಡಿಗೊದ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಬುಧವಾರ ಇದೇ ರೀತಿಯ ಘಟನೆ ನಡೆದಿದೆ. ಸಿಬ್ಬಂದಿ ಎಚ್ಚರಿಕೆ ನೀಡಿದರೂ ಕೂಡ ಕೇಳದ ಪ್ರಯಾಣಿಕ ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ. ವಿಮಾನವು ಹೈದರಾಬಾದ್‌ಗೆ ಬಂದಿಳಿದ ನಂತರ ಇವರನ್ನು ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಮಾಹಿತಿ ನೀಡಿದರು. ಇನ್ನು ಏರ್‌ಏಷ್ಯಾ ಇಂಡಿಯಾ ಸೋಮವಾರ ಗೋವಾ-ಮುಂಬೈ ವಿಮಾನದಿಂದ ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಏರ್ ಏಷ್ಯಾ ಇಂಡಿಯಾ ವಕ್ತಾರರು ಈ ಘಟನೆಯನ್ನು ದೃಢಪಡಿಸಿದ್ದಾರೆ. ಆರೋಗ್ಯ ಮತ್ತು ಆಡಳಿತ ಮಂಡಳಿಗಳು ಸೂಚಿಸಿದ ಸುರಕ್ಷತಾ ನಿಯಮಾವಳಿಗಳನ್ನು ಅನುಸರಿಸಲು ಇಬ್ಬರು ನಿರಾಕರಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಏರ್ ಏಷ್ಯಾ ಇಂಡಿಯಾ ತನ್ನ ಗೋವಾ-ಮುಂಬೈ ವಿಮಾನದಿಂದ ಅವರನ್ನು ಕೆಳಗಿಳಿಸಲಾಗಿದೆ.