ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಮಟ್ಟ ಕಳಪೆ ವರ್ಗದಲ್ಲಿದ್ದು, ಮತ್ತಷ್ಟು ಹದಗೆಡುತ್ತಿದೆ. ಬುಧವಾರ ದೆಹಲಿಯಲ್ಲಿ ಒಟ್ಟಾರೆ ಗುಣಮಟ್ಟ ಕಳಪೆ ವರ್ಗದಲ್ಲಿದ್ದು, ಎಕ್ಯೂಐ ಸ್ಕೇಲ್ 400 ದಾಖಲಾಗಿತ್ತು. ಈ ಸಂಖ್ಯೆ ಅಶೋಕ ನಗರದಲ್ಲಿ 405 ಇದ್ದು, ಭವನದಲ್ಲಿ 447 ಹಾಗು ದ್ವಾರಕದಲ್ಲಿ 429 ಕಂಡುಬಂದಿದೆ.
ದೀಪಾವಳಿ ಹಬ್ಬದ ಬಳಿಕ ಮತ್ತಷ್ಟು ಹದಗೆಟ್ಟಿದ್ದ ವಾಯು ಗುಣಮಟ್ಟ ಶನಿವಾರದ ಹೊತ್ತಿಗೆ ಕೊಂಚ ಸುಧಾರಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಾಯು ಮಾಲಿನ್ಯಕ್ಕೆ ಕೊಡುಗೆ ನೀಡುವ ಕೆಲಸಗಳ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ನಗರದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಭಾರಿ ಟ್ರಕ್‌ಗಳ ಪ್ರವೇಶಕ್ಕೂ ಕೂಡ ಅನುಮತಿ ನೀಡಲಾಗಿದೆ. ಈ ನಡುವೆ ಸೋಮವಾರದಿಂದ ಶಾಲೆಗಳೂ ಪುನರಾರಂಭವಾಗಿದೆ.
ದೆಹಲಿ ಜನರು ವಾಯುಮಾಲಿನ್ಯ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಗುಣಮಟ್ಟ ಸುಧಾರಣೆಗೆ ಸೂಕ್ತವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ದೆಹಲಿಯಲ್ಲಿನ ವಾಯು ವೇಗ ಗಂಟೆಗೆ 15 ಕಿ.ಮೀ ಇದ್ದು, ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಇದು ಮಾಲಿನ್ಯ ಮಟ್ಟ ನಿಯಂತ್ರಣಕ್ಕೆ ಸಹಾಯ ಮಾಡಲಿದೆ ಎನ್ನಲಾಗಿತ್ತು. ಆದಾಗ್ಯೂ ಸಂಜೆಗೆ ಎಕ್ಯೂಐ ಗಮನಾರ್ಹವಾಗಿ ಇಳಿಕೆ ಕಂಡಿತು.
ಬುಧವಾರ ಬೆಳಿಗ್ಗೆ ಗಾಳಿಯ ವೇಗ ಗಂಟೆಗೆ 8-10 ಕಿ.ಮೀ ಇತ್ತು. ಬುಧವಾರ ಮಧ್ಯಾಹ್ನ ವಾಯುವ್ಯ ದಿಕ್ಕಿನಿಂದ ಗಾಳಿ ಚಲಿಸಲಿದೆ ಐಎಂಡಿ ವಿಜ್ಞಾನಿ ಕುಲ್ದೀಪ್ ಶ್ರೀವಾಸ್ತವ ತಿಳಿಸಿದರು. ಕಠಿಣ ನಿರ್ಬಂಧಗಳ ನಡುವೆಯೂ ವಾಯು ಗುಣಮಟ್ಟ ತೀರಾ ಕಳಪೆ ವರ್ಗದಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾಗಬಹುದು. ವಾಯುವ್ಯದಿಂದ ಬೀಸುವ ಗಾಳಿಯೊಂದಿಗೆ ಕೃಷಿ ತ್ಯಾಜ್ಯ ಸುಡುವಿಕೆಯ ಅಂಶಗಳು ದೆಹಲಿಯಲ್ಲಿನ ಮಾಲಿನ್ಯಕಾರಕಗಳಿಗೆ ಕಾರಣವಾಗಬಹುದು. ಅಲ್ಲದೇ, ಇದಕ್ಕೆ ಸಾರಿಗೆ ವಾಹನಗಳ ಹೊಗೆಗಳು ಕೊಡುಗೆ ನೀಡಬಹುದು ಎಂದರು.
ದೆಹಲಿ ಸರ್ಕಾರ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದ ಜಂಟಿ ಯೋಜನೆಯನುಸಾರ ರಾಜಧಾನಿಯ ವಾಯು ಮಾಲಿನ್ಯಕ್ಕೆ ವಾಹನಗಳ ಕೊಡುಗೆ ಶೇ.45ರಷ್ಟಿದೆ ಎಂದು ವರದಿ ನೀಡಿತು. ಅನಿಲಗಳು ಮತ್ತು ಕಣಗಳ ಮಾಲಿನ್ಯಕಾರಕಗಳ ಕೊಡುಗೆ ಶೇ 33ರಷ್ಟಿದೆ. (ಐಎಎನ್ಎಸ್)
ಇದನ್ನೂ ಓದಿ:ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು