ನವದೆಹಲಿ:ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆಗಳ ಲೋಪದೋಷಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳ ಮೇಲೆ ಕ್ರಮ ಕೈಗೊಂಡಿದೆ. ಹೊಸ ಬೆಳವಣಿಗೆಯಲ್ಲಿ ಡಿಜಿಸಿಎ ನಾಗರಿಕ ವಿಮಾನಯಾನ ಅಗತ್ಯತೆ (ಸಿಎಆರ್)ಗೆ ತಿದ್ದುಪಡಿ ಮಾಡಿದೆ. ಪ್ರಯಾಣಿಕರು ಇದರ ಪ್ರಯೋಜನವನ್ನು ನೇರವಾಗಿ ಪಡೆಯಲಿದ್ದಾರೆ. ಹೊಸ ನಿಯಮಗಳು ಫೆಬ್ರವರಿ 15 ರಿಂದ ಜಾರಿಗೆ ಬರಲಿವೆ.
ಹೊಸ ನಿಯಮವೇನು?: ಪ್ರಯಾಣಿಕರ ಒಪ್ಪಿಗೆಯಿಲ್ಲದೇ ಟಿಕೆಟ್ ವರ್ಗವನ್ನು ಡೌನ್‌ಗ್ರೇಡ್ ಮಾಡಲು ವಿಮಾನಯಾನ ಸಂಸ್ಥೆಗಳು ಮುಂದಾಗುತ್ತಿವೆ. ಅಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂದರೆ, ಯಾರಾದರೂ ಬಿಸ್ನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿರುತ್ತಾರೆ ಎಂದಿಟ್ಟುಕೊಳ್ಳಿ. ಕೆಲವು ಕಾರಣಕ್ಕಾಗಿ ಪ್ರಯಾಣಿಕರನ್ನು ಬಿಸ್ನೆಸ್ ಕ್ಲಾಸ್ ಹೊರತುಪಡಿಸಿ ಬೇರೆ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಸಿಬ್ಬಂದಿ ಮನವಿ ಮಾಡುತ್ತಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ನಾಗರಿಕ ವಿಮಾನಯಾನದ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ಬಿಸ್ನೆಸ್ ಕ್ಲಾಸ್ ಟಿಕೆಟ್ ಅನ್ನು ಡೌನ್‌ಗ್ರೇಡ್ ಮಾಡಿದಾಗ ವಿಮಾನಯಾನ ಸಂಸ್ಥೆಗಳು ತೆರಿಗೆ ಸೇರಿದಂತೆ ಶೇ 75 ರಷ್ಟು ಹಣವನ್ನು ಪ್ರಯಾಣಿಕರಿಗೆ ಹಿಂತಿರುಗಿಸಬೇಕು. ಅಷ್ಟೇ ಅಲ್ಲ, ಮರುಪಾವತಿಗೆ ವಿಭಿನ್ನ ಷರತ್ತುಗಳನ್ನೂ ಸಹ ನಿಗದಿಪಡಿಸಲಾಗಿದೆ. ಅಂದರೆ, ದೇಶೀಯ ವಿಮಾನಗಳು ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಪ್ರತ್ಯೇಕ ಮರುಪಾವತಿ ಸೌಲಭ್ಯಗಳು ಸಿಗುತ್ತವೆ.