ರಾಜಮಂಡ್ರಿ : 2030ರ ವೇಳೆಗೆ ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 42 ಕೋಟಿಗೆ ಏರಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, "ಇಂದು 14.5 ಕೋಟಿ ಇರುವ ವಿಮಾನ ಪ್ರಯಾಣಿಕರ ದಟ್ಟಣೆ 2030ರ ವೇಳೆಗೆ 42 ಕೋಟಿಗೆ ಬೆಳೆಯಲಿದೆ ಮತ್ತು ನಾಗರಿಕ ವಿಮಾನಯಾನವು ದೇಶದಲ್ಲಿ ಸಾರಿಗೆಗೆ ಅಡಿಪಾಯವಾಗಲಿದೆ" ಎಂದರು.
ದೇಶದ ಆರು ಮೆಟ್ರೋ ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತಾ, ಮುಂಬೈ ಮತ್ತು ಹೈದರಾಬಾದ್ ಗಳ ಈಗಿರುವ 22 ಕೋಟಿ ಪ್ರಯಾಣಿಕ ಸಾಮರ್ಥ್ಯವು ಮುಂದಿನ ಐದು ವರ್ಷಗಳಲ್ಲಿ 42 ಕೋಟಿಗೆ ಏರಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 12 ಹೊಸ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗಿದ್ದು, ಇವುಗಳ ಒಟ್ಟು ಸಂಖ್ಯೆ 15 ಕ್ಕೆ ತಲುಪಿದೆ. ಮುಂದಿನ ವರ್ಷ ದೆಹಲಿ ಪಕ್ಕದ ಜೇವರ್ ನಲ್ಲಿ ಮತ್ತು ನವೀ ಮುಂಬೈನಲ್ಲಿ ಮತ್ತೆರಡು ಹೊಸ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳು ಸಿದ್ಧವಾಗಲಿವೆ ಎಂದು ಸಚಿವ ಸಿಂಧಿಯಾ ತಿಳಿಸಿದರು.
ಹೆಲಿಪೋರ್ಟ್ಗಳ ಸಂಖ್ಯೆ 149ರಿಂದ 220ಕ್ಕೆ ಏರಿಕೆ:2030 ರ ವೇಳೆಗೆ ಒಟ್ಟು ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್ಗಳು ಮತ್ತು ಹೆಲಿಪೋರ್ಟ್ಗಳ ಸಂಖ್ಯೆ 149 ರಿಂದ 220 ಕ್ಕೆ ಏರಲಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗಿತ್ತು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿಯೇ ಹೊಸ 75 ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್ಗಳು ಮತ್ತು ಹೆಲಿಪೋರ್ಟ್ಗಳನ್ನು ದೇಶದಲ್ಲಿ ಆರಂಭಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.