ನವದೆಹಲಿ:ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಪುರುಷ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಅಂಶಗಳು ಹೊರಬರುತ್ತಿವೆ. ವಿಮಾನದಲ್ಲಿ ಊಟದ ಸಮಯದಲ್ಲಿ ಆರೋಪಿಯು ನಾಲ್ಕು ಗ್ಲಾಸ್ ವಿಸ್ಕಿಯನ್ನು ಸೇವಿಸಿದ್ದ. ಸಂತ್ರಸ್ತೆಗೆ ವಿಮಾನದ ಪೈಲಟ್ ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಿದ್ದ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ವೈದ್ಯ ಸುಗತ ಭಟ್ಟಾಚಾರ್ಜಿ ವಿಮಾನಯಾನ ಸಂಸ್ಥೆಗೆ ತಾವು ಬರೆದ ಲಿಖಿತ ದೂರಿನಲ್ಲಿ ಅಂದು ನಡೆದ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI-102) ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪದ ಮೇಲೆ ಶಂಕರ್ ಮಿಶ್ರಾ ಎಂಬಾತನನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮಿಶ್ರಾ ಪಕ್ಕದಲ್ಲಿ ಅಮೆರಿಕದ ಮೂಲಕ ವೈದ್ಯ ಸುಗತ ಭಟ್ಟಾಚಾರ್ಜಿ ಕುಳಿತಿದ್ದರು. ಈ ವೇಳೆ ಆರೋಪಿ ಎಸಗಿರುವ ಕೃತ್ಯವನ್ನು ತಮ್ಮ ದೂರಿನಲ್ಲಿ ಅವರು ವಿವರಿಸಿದ್ದಾರೆ.
ಸುಗತ ಲಿಖಿತ ದೂರಿನಲ್ಲೇನಿದೆ?: ವಿಮಾನದ ಬಿಸಿನೆಸ್ ಕ್ಲಾಸ್‌ನ ಮೊದಲ ಸಾಲಿನಲ್ಲಿ ನಾನು 8 ಎ (ಕಿಟಕಿ) ಸೀಟಿನಲ್ಲಿ ಕುಳಿತಿದ್ದೆ. ಆರೋಪಿ ಶಂಕರ್ ಮಿಶ್ರಾ ಪಕ್ಕದ 8 ಸಿ ಸೀಟಿನಲ್ಲಿ ಕುಳಿತಿದ್ದ. ನನ್ನ ಪಕ್ಕದಲ್ಲಿದ್ದ ಆರೋಪಿ ಮಿಶ್ರಾ ಮಧ್ಯಾಹ್ನದ ಊಟದ ಸಮಯದಲ್ಲಿ ನಾಲ್ಕು ಗ್ಲಾಸ್ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ಹೊಟ್ಟೆಗಿಳಿಸಿದ್ದ. ಇದರಿಂದ ಆದಾಗಲೇ ತುಂಬಾ ಆತನಿಗೆ ಅಮಲೇರಿತ್ತು. ಹೀಗಾಗಿ ನಾನು ಮಿಶ್ರಾಗೆ ಹೆಚ್ಚಿನ ಮದ್ಯವನ್ನು ನೀಡುವುದನ್ನು ನಿಲ್ಲಿಸುವಂತೆ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಿದ್ದೆ ಎಂದು ಸುಗತ ಭಟ್ಟಾಚಾರ್ಯ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಮಧ್ಯಾಹ್ನದ ಊಟವನ್ನು ಬಡಿಸಿದ ಸ್ವಲ್ಪ ಸಮಯದ ನಂತರ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡಲಾಯಿತು. ಇದಾದ ನಂತರ ಕುಡಿದ ನಶೆಯಲ್ಲಿದ್ದ ಆರೋಪಿ ವಯಸ್ಸಾದ ಮಹಿಳೆಯ ಆಸನ (9ಎ)ದ ಕಡೆ ತೆರಳಿ, ತನ್ನ ಪ್ಯಾಂಟ್ನ ಜೀಪ್ ಬಿಚ್ಚಿ ಆ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಶೌಚಾಲಯವು ಅಲ್ಲಿಂದ ಕೇವಲ ನಾಲ್ಕು ಹೆಜ್ಜೆಗಳ ಮುಂದಿತ್ತು. ಆದರೆ, ನಶೆಯಲ್ಲಿದ್ದ ಆರೋಪಿಯು ನನ್ನ ಮೇಲೂ ಬಿದ್ದ. ನಾನು ಆಗ ಆರೋಪಿಯು ತನ್ನ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ ಎಂದು ಆರಂಭದಲ್ಲಿ ಭಾವಿಸಿದ್ದೆ ಎಂದು ತಿಳಿಸಿದ್ದಾರೆ.