ಹೈದರಾಬಾದ್: ಕೇರಳದ ಪ್ರಮುಖ ವಾಣಿಜ್ಯ ಮಹಾನಗರವಾದ ಕೊಚ್ಚಿಯನ್ನು ಕತಾರ್ ರಾಜಧಾನಿ ದೋಹಾದೊಂದಿಗೆ ಸಂಪರ್ಕಿಸಲು ಏರ್ ಇಂಡಿಯಾ ಸಜ್ಜಾಗಿದೆ. ಎರಡೂ ನಗರಗಳ ಮಧ್ಯೆ ಅಕ್ಟೋಬರ್ 23 ರಿಂದ ದೈನಂದಿನ ತಡೆರಹಿತ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ವಿಮಾನವು ಎರಡು ನಗರಗಳ ನಡುವೆ ಅನುಕೂಲಕರ ಮತ್ತು ಆರಾಮದಾಯಕ ನೇರ ಸಂಪರ್ಕದ ಅಗತ್ಯವನ್ನು ಪೂರೈಸಲಿದ್ದು, ಪ್ರಯಾಣಿಕರಿಗೆ ಸಮಯದ ಉಳಿತಾಯ ಮಾಡಲಿದೆ.
AI 953 ಸಂಖ್ಯೆಯ ವಿಮಾನವು ಸ್ಥಳೀಯ ಸಮಯ 0130 ಕ್ಕೆ ಹೊರಟು ದೋಹಾವನ್ನು 0345 ಗಂಟೆಗೆ ತಲುಪಲಿದೆ. ಹಿಂದಿರುಗುವ ವಿಮಾನ AI 954 ದೋಹಾದಿಂದ 0445 ಗಂಟೆಗೆ ಹೊರಟು ಕೊಚ್ಚಿಯಲ್ಲಿ 1135 ಗಂಟೆಗೆ (ಎಲ್ಲಾ ಸ್ಥಳೀಯ ಸಮಯ) ಇಳಿಯಲಿದೆ. A320 neo ವಿಮಾನದೊಂದಿಗೆ ಕಾರ್ಯನಿರ್ವಹಿಸುವ ಈ ಸೇವೆಯು 162 ಆಸನಗಳನ್ನು (ಎಕಾನಮಿಯಲ್ಲಿ 150 ಆಸನ ಮತ್ತು ಬಿಸಿನೆಸ್ ಕ್ಲಾಸ್ನಲ್ಲಿ 12 ಆಸನ) ಹೊಂದಿರಲಿದೆ. ಈಗಾಗಲೇ ಏರ್ ಇಂಡಿಯಾ ಕೊಚ್ಚಿಯಿಂದ ದುಬೈಗೆ ನೇರ ದೈನಂದಿನ ವಿಮಾನ ಸಂಪರ್ಕ ಹೊಂದಿದೆ. ಎಲ್ಲಾ ಚಾನೆಲ್ಗಳಲ್ಲಿ ವಿಮಾನದ ಬುಕಿಂಗ್ ಈಗಾಗಲೇ ಆರಂಭವಾಗಿದೆ.
ಬೋಯಿಂಗ್ ವಿಮಾನಗಳನ್ನು ಪಡೆದುಕೊಂಡ ಏರ್ ಇಂಡಿಯಾ: ಅಮೆರಿಕದ ವಾಶಿಂಗ್ಟನ್ನಲ್ಲಿರುವ ಬೋಯಿಂಗ್ ವಿಮಾನ ತಯಾರಿಕಾ ಕಂಪನಿಯ ನೆಲೆಯಿಂದ ಎರಡು ಹೊಸ ಬೋಯಿಂಗ್ 737 ಮ್ಯಾಕ್ಸ್ -8 ವಿಮಾನಗಳನ್ನು ಡೆಲಿವರಿ ಪಡೆದುಕೊಂಡಿರುವುದಾಗಿ ಏರ್ ಇಂಡಿಯಾದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಹೇಳಿದೆ. ವಿಮಾನಗಳ ಖರೀದಿಗಾಗಿ ಏರ್ ಇಂಡಿಯಾ ಗ್ರೂಪ್ ಮತ್ತು ಬೋಯಿಂಗ್ ಮಧ್ಯೆ ಇದೇ ವರ್ಷ ಒಪ್ಪಂದ ಏರ್ಪಟ್ಟಿತ್ತು. ಅದರ ಭಾಗವಾಗಿ ಈಗ ಮೊದಲ ಎರಡು ವಿಮಾನಗಳನ್ನು ಬೋಯಿಂಗ್ ಏರ್ ಇಂಡಿಯಾಗೆ ಹಸ್ತಾಂತರಿಸಿದೆ.
ಏರ್ ಇಂಡಿಯಾ ಹೊಸ ವಿನ್ಯಾಸದ ಸಮವಸ್ತ್ರ: ಕ್ಯಾಬಿನ್ ಸಿಬ್ಬಂದಿ, ಕಾಕ್ ಪಿಟ್ ಸಿಬ್ಬಂದಿ, ಮೈದಾನ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಮುಂಚೂಣಿಯಲ್ಲಿರುವ 10,000 ಕ್ಕೂ ಹೆಚ್ಚು ಏರ್ ಇಂಡಿಯಾ ಉದ್ಯೋಗಿಗಳಿಗೆ ಹೊಸ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಲು ಏರ್ ಇಂಡಿಯಾ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಕಂಪನಿಯ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಏರ್ ಇಂಡಿಯಾದ ಹೊಸ ಜಾಗತಿಕ ಬ್ರಾಂಡ್ ಅನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ.
ಇದನ್ನೂ ಓದಿ : ಪ್ರತಿ ನಿಮಿಷಕ್ಕೆ ಲಕ್ಷಾಂತರ ಡಾಲರ್ ಗಳಿಕೆ! ಅಸಲಿಯತ್ತೇನು? ಎಲೋನ್ ಮಸ್ಕ್ ಸ್ಪಷ್ಟನೆ ಹೀಗಿದೆ..