ನವದೆಹಲಿ/ವಾಷಿಂಗ್ಟನ್: ಭಾರತದ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯು ವಿಮಾನಯಾನ ಕ್ಷೇತ್ರದಲ್ಲಿ ಎರಡು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಏರ್‌ಬಸ್‌ನಿಂದ 250 ವಿಮಾನಗಳ ಏರ್ ಇಂಡಿಯಾ ಖರೀದಿಗೆ ಮುಂದಾಗಿದ್ದು, ಇದು ಜಗತ್ತಿನ ಅತಿ ದೊಡ್ಡ ವಿಮಾನಯಾನ ಒಪ್ಪಂದ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ ಬೋಯಿಂಗ್‌ನಿಂದ 290 ವಿಮಾನಗಳನ್ನು ಖರೀದಿಸಲು ಟಾಟಾ ಸಮೂಹ ತೀರ್ಮಾನಿಸಿದೆ.
ಇದನ್ನೂ ಓದಿ:ಮರಳಿ ಗೂಡು ಸೇರಿದ Air India..18,000 ಕೋಟಿ ರೂಗೆ TATA ಗ್ರೂಪ್ ಪಾಲಾದ ಸಂಸ್ಥೆ
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್, ಟಾಟಾ ಸನ್ಸ್ ಮಾಜಿ ಅಧ್ಯಕ್ಷರಾದ ರತನ್ ಟಾಟಾ, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಮ್ಯಾಕ್ರನ್, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ನಡೆದ ವರ್ಚುಯಲ್ ಕಾರ್ಯಕ್ರಮದಲ್ಲಿ ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಏರ್ ಇಂಡಿಯಾ ಮತ್ತು ಏರ್‌ಬಸ್ ನಡುವಿನ ಮಹತ್ವದ ಒಪ್ಪಂದದಲ್ಲಿ ಏರ್‌ಬಸ್‌ನ 250 ವಿಮಾನಗಳ ಪೈಕಿ 210 ಚಿಕ್ಕ (ನ್ಯಾರೋಬಾಡಿ) ವಿಮಾನಗಳು ಮತ್ತು 40 ದೊಡ್ಡ (ವೈಡ್‌ಬಾಡಿ) ವಿಮಾನಗಳ ಖರೀದಿ ಮಾಡಲಾಗುವುದು ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ. ಏರ್‌ಬಸ್‌ನೊಂದಿಗೆ ಈ ಒಪ್ಪಂದ ಮಾಡಿಕೊಂಡು ದಿನವೇ ಏರ್ ಇಂಡಿಯಾ ಮತ್ತು ಬೋಯಿಂಗ್ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಬೋಯಿಂಗ್ - ಏರ್ ಇಂಡಿಯಾ ಒಪ್ಪಂದ:ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಬೋಯಿಂಗ್‌ನಿಂದ 200ಕ್ಕೂ ಹೆಚ್ಚು ವಿಮಾನಗಳನ್ನು ಖರೀದಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋಬೈಡನ್ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ ಎದುರು ನೋಡುತ್ತಿರುವುದಾಗಿ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ:ಜಾಗತಿಕ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದ ಟಾಟಾ ಗ್ರೂಪ್
ವಿಮಾನ ಉತ್ಪಾದನೆಯಲ್ಲಿ ಅಮೆರಿಕವು ಜಗತ್ತನ್ನು ಮುನ್ನಡೆಸಬಲ್ಲದು. ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಐತಿಹಾಸಿಕ ಒಪ್ಪಂದದ ಮೂಲಕ 200ಕ್ಕೂ ಹೆಚ್ಚು ಅಮೆರಿಕನ್ ನಿರ್ಮಿತ ವಿಮಾನಗಳ ಖರೀದಿಸುವ ಕುರಿತಾಗಿ ಘೋಷಿಸಲು ನನಗೆ ಹೆಮ್ಮೆ ಆಗುತ್ತಿದೆ. ಈ ಖರೀದಿ ಒಪ್ಪಂದದಿಂದ ಅಮೆರಿಕದ 44 ರಾಜ್ಯಗಳಲ್ಲಿ ಒಂದು ಮಿಲಿಯನ್ ಅಮೆರಿಕನ್ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಜೊತೆಗೆ ಇದು ಅಮೆರಿಕ - ಭಾರತದ ಆರ್ಥಿಕ ಪಾಲುದಾರಿಕೆಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.
ನಮ್ಮ ಎಲ್ಲ ನಾಗರಿಕರಿಗೆ ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯವನ್ನು ಸೃಷ್ಟಿಸುವ ಉದ್ದೇಶ ನಮ್ಮದಾಗಿದೆ. ಇದರ ನಡುವೆ ಜಾಗತಿಕ ಸವಾಲುಗಳನ್ನು ಎದುರಿಸುವುದನ್ನು ನಾವು ಮುಂದುವರಿಸಬೇಕಿದೆ. ಪ್ರಧಾನಿ ಮೋದಿಯವರೊಂದಿಗೆ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಜೋಬೈಡನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಲಿಯನ್ ಡಾಲರ್ ವೆಚ್ಚದಲ್ಲಿ 500 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ?