ನವದೆಹಲಿ:ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು 3,600 ಕೋಟಿ ರೂಪಾಯಿಗಳ ನಷ್ಟವನ್ನು ಭಾರತದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಅನುಭವಿಸಿದೆ ಎಂದು ಏರ್ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಕಳೆದ ವರ್ಷ, ನಾವು ಸುಮಾರು 3,600 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದ್ದೇವೆ, ಅದು ಹಿಂದಿನ 2018-19 ವರ್ಷಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ನಷ್ಟವಾಗಿದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
2018-19ರಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು 8,556.35 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು.
ಇದನ್ನೂ ಓದಿ:ಯುಕೆ ವಿಮಾನಗಳಿಗೆ ನಿಷೇಧ ಮುಂದುವರಿಸುವ ಸಾಧ್ಯತೆ: ವಿಮಾನಯಾನ ಸಚಿವ
ಪ್ರತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹಣಕಾಸು ವಹಿವಾಟು ಸುಧಾರಣೆಯಾಗಿದೆ. ಎರಡನೇ ತ್ರೈಮಾಸಿಕ ಮೊದಲನೇ ತ್ರೈಮಾಸಿಕಕ್ಕಿಂತ ಉತ್ತಮವಾಗಿತ್ತು. ಇದಾದ ಮೂರನೇ ತ್ರೈಮಾಸಿಕವೂ ಉತ್ತಮವಾಗಿದೆ. ವಿಮಾನಗಳ ಸಂಚಾರವೂ ಉತ್ತಮವಾಗಿದೆ ಹೆಚ್ಚಾಗಿ ಅಮೆರಿಕಕ್ಕೆ ವಿಮಾನಯಾನ ಕೈಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಜೀವ್ ಬನ್ಸಾಲ್ ಮಾಹಿತಿ ನೀಡಿದ್ದಾರೆ.
ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಮಾತನಾಡಿ, ವಂದೇ ಭಾರತ್ ಮಿಷನ್ ಅಡಿಯಲ್ಲಿ 4.2 ಮಿಲಿಯನ್ ಪ್ರಯಾಣಿಕರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ ಮತ್ತು ಏರ್ ಇಂಡಿಯಾ ಪಾಲು 10 ಲಕ್ಷ ಮತ್ತು ಅಂದರೆ ಶೇಕಡಾ 25ರಷ್ಟಿದೆ ಎಂದಿದ್ದಾರೆ.
ವಿಮಾನ ನಿಲ್ದಾಣಗಳ ಖಾಸಗೀಕರಣವನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ನಡೆಸಲು ಸರ್ಕಾರ ಯೋಜಿಸುತ್ತಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅಧ್ಯಕ್ಷ ಅರವಿಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.