ನವದೆಹಲಿ:ದೆಹಲಿ ವಿಮಾನ ನಿಲ್ದಾಣದಲ್ಲಿ ತರಬೇತಿಯಲ್ಲಿದ್ದ ಏರ್ ಇಂಡಿಯಾ ಪೈಲಟ್ ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಹೃದಯ ಸ್ತಂಭನದಿಂದ ಬಳಲುತ್ತಿರುವಂತೆ ತೋರುತ್ತಿದೆ. 30 ವರ್ಷದ ಹಿಮ್ಮನಿಲ್ ಕುಮಾರ್ ನಿಲ್ದಾಣದ ಟರ್ಮಿನಲ್ 3ರಲ್ಲಿ ಏರ್ ಇಂಡಿಯಾದ ಕಾರ್ಯಾಚರಣೆ ವಿಭಾಗದಲ್ಲಿ ತರಬೇತಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದರು.
ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಹಿಮ್ಮನಿಲ್ ಕುಮಾರ್ ಸಹಾಯಕ್ಕೆ ಸಹೋದ್ಯೋಗಿಗಳು ಬಂದಿದ್ದಾರೆ. ತಕ್ಷಣವೇ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಮನಿಲ್ ಕುಮಾರ್ ಅಕ್ಟೋಬರ್ 3ರಿಂದ ಬೋಯಿಂಗ್ 777 ವಿಮಾನ ಚಲಾಯಿಸಲು ತರಬೇತಿಯಲ್ಲಿದ್ದರು. ವಿಮಾನಯಾನ ಸಂಸ್ಥೆಯು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಮೃತರ ತಂದೆ ಏರ್‌ಲೈನ್‌ನಲ್ಲಿ ಹಿರಿಯ ಕಮಾಂಡರ್ ಆಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.