ನವದೆಹಲಿ: ಕಳೆದ ಕೆಲ ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದ್ದು, ಭಾರತೀಯರು ಸಂಕಷ್ಟಕ್ಕೊಳಗಾಗಿದ್ದರು. ಭಾರತ ಸರ್ಕಾರ ಭಾರತೀಯರನ್ನು ರಕ್ಷಿಸುವಲ್ಲಿ ಭಾರಿ ಶ್ರಮ ವಹಿಸಿತು. ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಯಿತು. ಹಂತ ಹಂತವಾಗಿ ವಿದ್ಯಾರ್ಥಿಗಳು ಸೇರಿ ಭಾರತೀಯರನ್ನು ದೇಶಕ್ಕೆ ಕರೆತರಲಾಗಿದೆ.
ಈಶಾನ್ಯ ಉಕ್ರೇನಿಯನ್ ನಗರ ಸುಮಿಯಿಂದ ಪೋಲೆಂಡ್‌ಗೆ ಸ್ಥಳಾಂತರಿಸಲಾಗಿದ್ದ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಗುರುವಾರ ರಾತ್ರಿ 11.30 ರ (ಐಎಸ್‌ಟಿ) ಸುಮಾರಿಗೆ ಪೋಲೆಂಡ್ನ ರ್ಜೆಸ್ಜೋವ್‌ನಿಂದ (Rzeszow) ಹೊರಟು ಶುಕ್ರವಾರ ಬೆಳಗ್ಗೆ 5.45ಕ್ಕೆ ದೆಹಲಿಗೆ ಬಂದು ಇಳಿಯಿತು ಎಂದು ಮಾಹಿತಿ ನೀಡಿದ್ದಾರೆ.
ಸುಮಿಯಿಂದ ಸ್ಥಳಾಂತರಿಸಲ್ಪಟ್ಟ 600 ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ಪೋಲೆಂಡ್‌ಗೆ ಮೂರು ವಿಮಾನಗಳನ್ನು ಕಳುಹಿಸಿದೆ. ಸುಮಿಯಿಂದ 600 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಂಗಳವಾರದಿಂದ ಪ್ರಾರಂಭವಾಗಿತ್ತು.