ಕೊಚ್ಚಿ (ಕೇರಳ):ಏರ್ ಇಂಡಿಯಾ ಎಕ್ಸ್ಪ್ರೆಸ್ನ ಉದ್ಯೋಗಿಯೊಬ್ಬರು ಅಕ್ರಮವಾಗಿ ಒಂದೂವರೆ ಕೆ ಜಿ ಚಿನ್ನವನ್ನು ಸಾಗಿಸುತ್ತಿದ್ದಾಗ ಕಸ್ಟಮ್ಸ್ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿನ್ನವನ್ನು ಕೈಗೆ ಸುತ್ತಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಉದ್ಯೋಗಿಯನ್ನ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಬಹ್ರೇನ್‌ನಿಂದ ಕೋಯಿಕ್ಕೋಡ್ ಮೂಲಕ ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪಿದೆ. ಆ ವಿಮಾನದ ಕ್ಯಾಬಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶಫಿ ಎಂಬಾತ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂಬ ರಹಸ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ಗೆ ಲಭಿಸಿದೆ. ನಂತರ ಕಸ್ಟಮ್ಸ್ ಅಧಿಕಾರಿಗಳು ಆತನ ಮೇಲೆ ನಿಗಾ ಇಟ್ಟಿದ್ದರು. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಗ್ರೀನ್ ಚಾನೆಲ್‌ನಿಂದ ಧಾವಿಸಿ ಬಂದ ಶಫಿ ಸಿಕ್ಕಿಬಿದ್ದಾಗ ಈ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ :48ರ ಪ್ರಾಯದ ಮಹಿಳೆ ಮೇಲೆ 22 ವರ್ಷದ ಯುವಕನ ಕ್ರಶ್: ನಂಬರ್ ಬ್ಲಾಕ್ ಮಾಡ್ತೀನಿ ಅಂದಿದ್ದಕ್ಕೇ ಮರ್ಡರ್ ಮಾಡಿದ ಕ್ಯಾಬ್ ಚಾಲಕ
ಚಿನ್ನದ ಮೌಲ್ಯ 75 ಲಕ್ಷ ರೂ : 1,487 ಗ್ರಾಂ ಚಿನ್ನವನ್ನು ಶಫಿ ಕೈಗೆ ಸುತ್ತಿಕೊಂಡಿದ್ದ. ಕಾಣದಂತೆ ಶರ್ಟ್ ತೋಳುಗಳಿಂದ ಮುಚ್ಚಿಕೊಂಡಿದ್ದ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ಚಿನ್ನದ ಮೌಲ್ಯ ಸುಮಾರು 75 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿಕೆ ಬಿಡುಗಡೆ ಮಾಡಿದೆ.