ನವದೆಹಲಿ:ಇತ್ತೀಚೆಗಷ್ಟೇ ಸರ್ಕಾರದ ಅಧಿಪತ್ಯದಿಂದ ಬೇರ್ಪಟ್ಟು, ಮರಳಿ ಟಾಟಾ ತೆಕ್ಕೆಗೆ ತೆರಳಿದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದ್ದು, ಬುಧವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿರುವ ಕೆಲವು ವಿಮಾನ ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಸ್ಪಷ್ಟಪಡಿಸಿದೆ.
ಪ್ರಯಾಣಿಕರಿಗೆ ಈ ಮೂಲಕ ಏರ್ ಇಂಡಿಯಾ ಮಾಹಿತಿ ನೀಡಿದ್ದು, ದೆಹಲಿಯಿಂದ ಅಮೆರಿಕದ ಜಾನ್ ಎಫ್ ಕೆನಡಿ ಇಂಟರ್ನ್ಯಾಷನಲ್ ಏರ್ಫೋರ್ಟ್, ದೆಹಲಿಯಿಂದ ಅಮೆರಿಕದ ಓಹಾರೆ ಇಂಟರ್ ನ್ಯಾಷನಲ್ ಏರ್ಪೋರ್ಟ್, ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ ಇಂಟರ್ನ್ಯಾಷನಲ್ ಏರ್ಪೋರ್ಟ್ ಮತ್ತು ಮುಂಬೈನಿಂದ ಅಮೆರಿಕದ ನೆವಾರ್ಕ್ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ತೆರಳಲಿರುವ ಮತ್ತು ಅಲ್ಲಿಂದ ಬರಲಿರುವ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಮತ್ತೊಂದು ಟ್ವೀಟ್ನಲ್ಲಿ ದೆಹಲಿಯಿಂದ ವಾಷಿಂಗ್ಟನ್ ಡಿಸಿ ಹೊರಡಲಿರುವ AI103 ವಿಮಾನ ನಿಗದಿಯಂತೆ ಕಾರ್ಯಾಚರಣೆ ಮಾಡಲಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಅಮೆರಿಕದ ವಿವಿಧ ಸ್ಥಳಗಳಿಗೆ ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ವಿಮಾನಯಾನ ಸಂಚಾರಕ್ಕೆ ರದ್ದು ಮಾಡಲು ಕಾರಣ: ಅಮೆರಿಕದಲ್ಲಿ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕಾರಣದಿಂದ ವಿಮಾನಯಾನ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಏರ್ ಇಂಡಿಯಾ ಟ್ವೀಟ್ನಲ್ಲಿ ಹೇಳಿದೆ. ಮೂಲಗಳ ಪ್ರಕಾರ 5ಜಿ ತಂತ್ರಜ್ಞಾನ ಅಳವಡಿಕೆಯಿಂದಾಗಿ ವಿಮಾನದಲ್ಲಿನ ಕೆಲವು ಉಪಕರಣಗಳು ಸರಿಯಾಗಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣದಿಂದ ಏರ್ ಇಂಡಿಯಾ ತಮ್ಮ ವಿಮಾನಯಾನ ಸೇವೆಯನ್ನು ಅಮೆರಿಕಕ್ಕೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಜಗತ್ತಿನ ನಂ.1 ಶ್ರೀಮಂತ ಉದ್ಯಮಿಗೆ ಆಹ್ವಾನ ; ಸಚಿವ ನಿರಾಣಿ ಟ್ವೀಟ್