ನವದೆಹಲಿ: 2022ರ ಮಾರ್ಚ್ 9ರಂದು ನಡೆದ ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್ ವೇಳೆ ಆಕಸ್ಮಿಕವಾಗಿ ಪಾಕ್ನಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಎಎಫ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ:ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಕ್ಷಿಪಣಿ: ತನಿಖೆಗೆ ಕೇಂದ್ರ ಸೂಚನೆ
ಸೇವೆಯಿಂದ ವಜಾಗೊಂಡಿರುವ ಅಧಿಕಾರಿಗಳಲ್ಲಿ ಗ್ರೂಪ್ ಕ್ಯಾಪ್ಟನ್, ವಿಂಗ್ ಕಮಾಂಡರ್ ಮತ್ತು ಸ್ಕ್ವಾಡ್ರನ್ ಲೀಡರ್ ಸೇರಿದ್ದಾರೆ. ಬ್ರಹ್ಮೋಸ್ ಕ್ಷಿಪಣಿಯನ್ನ 2022ರ ಮಾರ್ಚ್ 9ರಂದು ಆಕಸ್ಮಿಕವಾಗಿ ಹಾರಿಸಲಾಗಿತ್ತು. ಅದು ಪಾಕ್ ನೆಲದಲ್ಲಿ ಬಿದ್ದಿತ್ತು. ಇದರ ಸತ್ಯಾಸತ್ಯತೆ ತಿಳಿದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ತನಿಖಾ ತಂಡ ರಚನೆ ಮಾಡಿತ್ತು.
ಇದೇ ವಿಚಾರವನ್ನಿಟ್ಟುಕೊಂಡು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪಾಕ್ ಆಗ್ರಹಿಸಿತ್ತು. ಜೊತೆಗೆ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ ಪಾರದರ್ಶಕ ತನಿಖೆಗೆ ಒತ್ತಾಯ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ ಈ ವಿಷಯವನ್ನ ಭಾರತ ಗಂಭೀರವಾಗಿ ತೆಗೆದುಕೊಂಡಿದ್ದು, ಉನ್ನತ ಮಟ್ಟದ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಹೇಳಿತ್ತು. ಜೊತೆಗೆ ಸದನದಲ್ಲಿ ಈ ವಿಚಾರವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ಸಹ ಹಂಚಿಕೊಂಡಿದ್ದರು.
ವಿಚಾರಣೆ ನಡೆಸಿದ ಬಳಿಕ ಇದೀಗ ಪ್ರಾಥಮಿಕ ಹೊಣೆಗಾರರನ್ನಾಗಿ ಮೂವರು ಐಎಎಫ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ವಾಯುಪಡೆ ತಿಳಿಸಿದೆ.