ನವದೆಹಲಿ:ಇಂದು ಭಾರತೀಯ ವಾಯುಪಡೆ ದಿನ. ಈ ಹಿನ್ನೆಲೆಯಲ್ಲಿ ದೇಶ ಸಂಭ್ರಮಿಸುತ್ತಿದೆ. ಪ್ರಧಾನ ಮಂತ್ರಿ ಮೋದಿ ಅವರು ವಾಯುಪಡೆ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ನಮ್ಮ ವಾಯುಪಡೆ ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಧೈರ್ಯ, ಪರಿಶ್ರಮ ಮತ್ತು ವೃತ್ತಿಪರತೆಗೆ ಭಾರತೀಯ ವಾಯುಪಡೆ ಮತ್ತೊಂದು ಹೆಸರಾಗಿದೆ ಎಂದು ಬಣ್ಣಿಸಿದ್ದಾರೆ.
ಜೊತೆಗೆ ವಾಯುಪಡೆ ಸಿಬ್ಬಂದಿ ದೇಶವನ್ನು ರಕ್ಷಿಸುವಲ್ಲಿ ಮತ್ತು ಹಲವಾರು ಸವಾಲುಗಳ ಎದುರಿಸುವ ಸಮಯದಲ್ಲಿ ತಮ್ಮ ಮಾನವೀಯ ಮನೋಭಾವದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡಾ ವಾಯುಪಡೆಯ ಯೋಧರು ಮತ್ತು ಅವರ ಕುಟುಂಬಗಳಿಗೆ ವಾಯುಪಡೆಯ ದಿನದ ಶುಭಾಶಯಗಳು. ಶಾಂತಿ ಮತ್ತು ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಭಾರತೀಯ ವಾಯುಪಡೆಯ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ. ಐಎಎಫ್ ತನ್ನ ಶ್ರೇಷ್ಠತೆಯ ಗುಣಮಟ್ಟವನ್ನು ಉಳಿಸಿಕೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಾಯುಪಡೆಯ ದಿನದ ಹೃತ್ಪೂರ್ವಕ ಶುಭಾಶಯಗಳು. ಯುದ್ಧವಾಗಲಿ ಅಥವಾ ಶಾಂತಿಯಾಗಲಿ, ನಮ್ಮ ಯೋಧರು ಯಾವಾಗಲೂ ತಮ್ಮ ಧೈರ್ಯ, ವೃತ್ತಿಪರತೆ ಮತ್ತು ಶ್ರೇಷ್ಠತೆಯ ಮೂಲಕ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರು ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿ ಹಾರೈಸಿದ್ದಾರೆ.
ಭಾರತೀಯ ವಾಯುಪಡೆ ದಿನದ ಹಿನ್ನೆಲೆ ಮತ್ತಷ್ಟು ವಿಚಾರಗಳು..
ಭಾರತೀಯ ವಾಯುಪಡೆ ದಿನವನ್ನು ಅಕ್ಟೋಬರ್ 8ರಂದು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ. ಬ್ರಿಟಿಷರು 1932ರಲ್ಲಿ ವಾಯುಪಡೆಯನ್ನು ಸ್ಥಾಪಿಸಿದ್ದು, ಇಂದಿಗೆ 89ನೇ ವರ್ಷಕ್ಕೆ ವಾಯುಪಡೆ ಕಾಲಿಟ್ಟಿದ್ದು, ಭಾರತದೆಲ್ಲೆಡೆ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ಹಿಂಡನ್ ಏರ್ಬೇಸ್ನಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಸಂಭ್ರಮ ಮನೆ ಮಾಡಿದೆ.
ಬ್ರಿಟಿಷರು ತಾವು ಸ್ಥಾಪನೆ ಮಾಡಿದ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ಫೋರ್ಸ್ ಎಂದು ಕರೆಯುತ್ತಿದ್ದರು. ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ರಾಯಲ್ ಎಂಬ ಪದವನ್ನು ತೆಗೆದುಹಾಕಿ ಕೇವಲ ಇಂಡಿಯನ್ ಏರ್ಫೋರ್ಸ್ ಎಂಬ ಹೆಸರನ್ನು ಉಳಿಸಿಕೊಳ್ಳಲಾಯಿತು.
ವಾಯುಪಡೆಗೆ ಇತ್ತೀಚೆಗೆ ನೂತನ ಮುಖ್ಯಸ್ಥರ ನೇಮಕವಾಗಿದೆ. ಏರ್ ಚೀಫ್ ಮಾರ್ಷಲ್ ಆಗಿದ್ದ ರಾಕೇಶ್ ಕುಮಾರ್ ಸಿಂಗ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಹೊಸದಾಗಿ ವಿವೇಕ್ ರಾಮ್ ಚೌಧರಿ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಧಿಕಾರ ಸ್ವೀಕರಿಸಿಕೊಂಡ ಎಂಟು ದಿನದಲ್ಲೇ ವಾಯುಪಡೆ ದಿನ ಆಚರಣೆ ಮಾಡುತ್ತಿರುವುದು ಡಬಲ್ ಸಂಭ್ರಮ ಮೂಡಿಸಿದೆ.
ಈ ಬಾರಿಯ ಘೋಷವಾಕ್ಯ ಘೋಷಣೆಯಾಗಿಲ್ಲ
ಪ್ರತಿ ಬಾರಿಯೂ ವಾಯುಪಡೆ ದಿನವನ್ನು ಆಚರಣೆ ಮಾಡಬೇಕಾದರೆ ಘೋಷ ವಾಕ್ಯವೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಇನ್ನೂ ಘೋಷವಾಕ್ಯ ಬಿಡುಗಡೆಯಾಗಿಲ್ಲ. 2020ರಲ್ಲಿ ವಾಯುಪಡೆಯು ಸಿಬ್ಬಂದಿಯ ಅವಿರತ ಪ್ರಯತ್ನಗಳು ಮತ್ತು ತ್ಯಾಗಗಳು ಎಂಬ ಘೋಷ ವಾಕ್ಯವಿತ್ತು. 2019ರಲ್ಲಿ 'ನಿಮ್ಮ ವಾಯುಪಡೆ ಬಗ್ಗೆ ತಿಳಿದುಕೊಳ್ಳಿ' ಎಂಬ ಘೋಷವಾಕ್ಯ ಇಟ್ಟುಕೊಳ್ಳಲಾಗಿತ್ತು. ಆದರೆ ಈ ಬಾರಿಯ ಘೋಷವಾಕ್ಯ ಇನ್ನೂ ಘೋಷಣೆಯಾಗಿಲ್ಲ.