ನವದೆಹಲಿ: ಏರ್ ಏಷ್ಯಾ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ ರಾಜಧಾನಿ ಲಖನೌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಮಾನವು ಲಖನೌ ಏರ್ಪೋರ್ಟ್ನಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಬೇಕಿತ್ತು ಎಂದು ತಿಳಿದು ಬಂದಿದೆ.
ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ಐ5-319 ವಿಮಾನವು ಲಖನೌನಿಂದ ಕೋಲ್ಕತ್ತಾಗೆ ಹಾರಾಟ ಮಾಡಬೇಕಿತ್ತು. ಈ ವೇಳೆ ಲಖನೌ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ರೋಲ್ ಸಮಯದಲ್ಲಿ ಹಕ್ಕಿ ಹೊಡೆದಿದೆ. ಹೀಗಾಗಿಯೇ, ವಿಮಾನವು ಮರಳಿ ತಕ್ಷಣವೇ ತುರ್ತು ಭೂಸ್ಪರ್ಶ ಮಾಡಲಾಯಿತು. ಅಲ್ಲದೇ, ವಿಮಾನವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಮಾಸ್ಕೋ-ಗೋವಾ ವಿಮಾನಕ್ಕೆ ಬಂದಿದ್ದು ಹುಸಿ ಬಾಂಬ್ ಬೆದರಿಕೆ; ಪರಿಶೀಲನೆ ಬಳಿಕ ಹಾರಾಟ
ಈ ವಿಷಯವನ್ನು ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ವಕ್ತಾರರು ಸಹ ಖಚಿತ ಪಡಿಸಿದ್ದು, ಈ ಘಟನೆಯಿಂದ ಉಂಟಾಗಿ ಅಡಚಣೆ ಬಗ್ಗೆ ಪ್ರಯಾಣಿಕರಲ್ಲಿ ಸಂಸ್ಥೆಯು ಕ್ಷಮೆ ಕೂಡ ಕೇಳಿದೆ. ಲಖನೌನಿಂದ ಕೋಲ್ಕತ್ತಾಗೆ ಹಾರಲು ಸಜ್ಜಾಗಿದ್ದ ಐ5-319 ವಿಮಾನಕ್ಕೆ ಪಕ್ಷಿ ಬಂದು ಅಪ್ಪಳಿಸಿದೆ. ಇದರ ಪರಿಣಾಮವಾಗಿ ವಿಮಾನವು ಏರ್ಪೋರ್ಟ್ನ ಪಾರ್ಕಿಂಗ್ ಸ್ಥಳಕ್ಕೆ ಮರಳಿ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಕ್ಷಮೆಯಾಚಿಸಿದ ಏರ್ ಏಷ್ಯಾ: ಅಲ್ಲದೇ, ಕೋಲ್ಕತ್ತಾಕ್ಕೆ ಹೊರಡುತ್ತಿದ್ದ ಈ ವಿಮಾನದಲ್ಲಿ ಪ್ರಭಾವಿಗಳು ಮತ್ತು ಪ್ರಮುಖರು ಸಹ ಇದ್ದರು ಎಂದು ತಿಳಿಸಿರುವ ಅವರು, ವಿಮಾನ ಹಾರಾಟದಲ್ಲಿಉಂಟಾದ ಅಡಚಣೆಯಿಂದ ಪ್ರಯಾಣಿಕರ ಇತರ ನಿಗದಿತ ಕಾರ್ಯಗಳ ಮೇಲಿನ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಇದರಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏರ್ ಏಷ್ಯಾ ವಿಮಾನಯಾನ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಇದನ್ನು ಭಾರತೀಯ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಎಂದೂ ಕರೆಯಲಾಗುತ್ತಿದೆ. ಸದ್ಯ ಈ ಸಂಸ್ಥೆಯನ್ನು ಎಐಎಕ್ಸ್ ಕನೆಕ್ಟ್ ಎಂದು ಹೆಸರಿಸಲಾಗುತ್ತಿದೆ. ಇನ್ನು, ಈ ವಿಮಾನಯಾನ ಸಂಸ್ಥೆಯು ಟಾಟಾ ಸನ್ಸ್ ಹಾಗೂ ಏರ್‌ಏಷ್ಯಾ ಬಿಎಚ್‌ಡಿ ನಡುವಿನ ಜಂಟಿ ಉದ್ಯಮವಾಗಿತ್ತು. ಆದರೆ, ಇತ್ತೀಚೆಗೆ ಏರ್‌ಏಷ್ಯಾ ಬಿಎಚ್‌ಡಿ ತನ್ನ ಶೇ.16.33ರಷ್ಟು ಪಾಲನ್ನು ಏರ್ ಇಂಡಿಯಾಗೆ ಮಾರಾಟ ಮಾಡಿದ್ದು, ಸಂಪೂರ್ಣವಾಗಿ ಈ ಸಂಸ್ಥೆಯು ಟಾಟಾ ಸನ್ಸ್ ಒಡೆತನದಲ್ಲಿದೆ. ಕಳೆದ ವರ್ಷವಷ್ಟೇ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸಿದೆ.
ಇದನ್ನೂ ಓದಿ:ಬೆಂಗಳೂರಿನಿಂದ ತೆರಳುತ್ತಿದ್ದ ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ವಿಮಾನಕ್ಕೆ ಪಕ್ಷಿಗಳ ಡಿಕ್ಕಿ ಹೇಗೆ?:ಸಾಮಾನ್ಯವಾಗಿ ವಿಮಾನಗಳು ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಹಾರಾಟ ಮಾಡುತ್ತವೆ. ಆದರೆ, ವಿಮಾನ ನಿಲ್ದಾಣದಲ್ಲಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ಭೂಮಿಗೆ ಹತ್ತಿರದಲ್ಲಿ ಹಾರಾಟ ಮಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವಂತಹ ಹೆಚ್ಚಿನ ಘಟನೆ ವರದಿಯಾಗುತ್ತವೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಪಕ್ಷಿಗಳು ವಿಮಾನಕ್ಕೆ ಅಪ್ಪಳಿಸಿದ ಹೆಚ್ಚಿನ ಘಟನೆಗಳಲ್ಲಿ ಯಾವುದೇ ಅಪಾಯ ಉಂಟಾಗುವುದಿಲ್ಲ. ಆದರೆ, ಕೆಲವೊಮ್ಮೆ ಪರಿಸ್ಥಿತಿ ಹದಗೆಟ್ಟು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗುತ್ತದೆ. ಕಳೆದ ಕೆಲ ತಿಂಗಳ ಹಿಂದೆ ಆಕಾಶ ಏರ್ ಲೈನ್ಸ್‌ನ ವಿಮಾನವು ಮುಂಬೈನಿಂದ ಬೆಂಗಳೂರಿಗೆ ಹಾರಾಟ ಮಾಡುತ್ತಿದ್ದಾಗ ಕೂಡ ಪಕ್ಷಿ ಡಿಕ್ಕಿ ಹೊಡೆದು ತುರ್ತು ಭೂಸ್ಪರ್ಶ ಮಾಡಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.