ಕೋಲ್ಕತಾ: ಇಂದು ಕೋಲ್ಕತ್ತಾದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ನಡೆಯಲಿರುವ ರ‍್ಯಾಲಿಗೆ ನಗರ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆ ರ‍್ಯಾಲಿ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈಗಿನಿಂದಲೇ ಮತಬೇಟೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ಹೆಚ್ಚು ಅಲ್ಪಸಂಖ್ಯಾತರಿರುವ ಮೆಟಿಯಾಬ್ರೂಜ್ ಪ್ರದೇಶದಲ್ಲಿ ರ‍್ಯಾಲಿ ನಡೆಸುವ ಮೂಲಕ ತಮ್ಮ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಆದರೆ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಎಐಎಂಐಎಂ ರಾಜ್ಯ ಕಾರ್ಯದರ್ಶಿ ಜಮೀರುಲ್ ಹಸನ್ ತಿಳಿಸಿದ್ದಾರೆ.