ಹೈದರಾಬಾದ್ (ತೆಲಂಗಾಣ): ''ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೀವು ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಬೇಕೇ ಹೊರತು ವಯನಾಡ್ ಕ್ಷೇತ್ರದಿಂದ ಅಲ್ಲ'' ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲೆಸೆದರು.
ತಮ್ಮ ಲೋಕಸಭಾ ಕ್ಷೇತ್ರ ಹೈದರಾಬಾದ್‌ನಲ್ಲಿ ಭಾನುವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ನಡೆಯಿತು'' ಎಂದರು. ಮುಂದುವರೆದು ಮಾತನಾಡುತ್ತಾ, ''ನಾನು ನಿಮ್ಮ ನಾಯಕನಿಗೆ (ರಾಹುಲ್ ಗಾಂಧಿ) ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ತಿಳಿಸುತ್ತೇನೆ. ನಾನು ಇದಕ್ಕೆ ಸಿದ್ಧ" ಎಂದು ಹೇಳಿದರು.
ತೆಲಂಗಾಣದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿಗಾಗಿ ಎರಡೂ ಪಕ್ಷಗಳು ಹವಣಿಸುತ್ತಿದ್ದು, ಕಾಂಗ್ರೆಸ್ ಮತ್ತು ಎಐಎಂಐಎಂ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ.
'ತ್ರಿಕೂಟ'ದ ವಿರುದ್ಧ ಹೋರಾಟ- ರಾಹುಲ್ ಗಾಂಧಿ:ಈ ತಿಂಗಳ ಆರಂಭದಲ್ಲಿ ತೆಲಂಗಾಣದ ತುಕ್ಕುಗುಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ''ತೆಲಂಗಾಣದಲ್ಲಿ ಬಿಜೆಪಿ, ಬಿಆರ್‌ಎಸ್ ಮತ್ತು ಎಐಎಂಐಎಂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಆದರೆ, ನಮ್ಮ ಪಕ್ಷವು ಈ ತ್ರಿಕೂಟದ ವಿರುದ್ಧ ಹೋರಾಡುತ್ತಿದೆ'' ಎಂದಿದ್ದರು.
''ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಬಿಆರ್‌ಎಸ್ ವಿರುದ್ಧವಷ್ಟೇ ಹೋರಾಡುತ್ತಿಲ್ಲ, ಬಿಜೆಪಿ ಮತ್ತು ಎಐಎಂಐಎಂ ಜೊತೆಗೂ ಹೋರಾಡುತ್ತಿದೆ. ಆ ಪಕ್ಷಗಳು ತಮ್ಮನ್ನು ಬೇರೆ ಬೇರೆ ಪಕ್ಷಗಳೆಂದು ಕರೆದುಕೊಳ್ಳುತ್ತಿವೆ. ಆದರೆ, ಅವುಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ'' ಎಂದು ರಾಹುಲ್ ಟೀಕಿಸಿದ್ದರು.