ಕರ್ನಾಟಕ

karnataka

By

Published : Nov 25, 2022, 9:51 PM IST

ETV Bharat / bharat

ಗುಜರಾತ್ ಚುನಾವಣೆಯಲ್ಲಿ ಎಐಎಂಐಎಂ ಸ್ಫರ್ಧೆ ಬಿಜೆಪಿಗೇ ವರವಾಗಲಿದೆಯಾ?!

ಆಲ್ ಇಂಡಿಯಾ ಮಜ್ಲಿಸ್ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಪಕ್ಷವು ಮುಸ್ಲಿಂ ಭಾವನೆಯನ್ನು ಪ್ರತಿನಿಧಿಸುತ್ತ ಗುಜರಾತ್‌ನ ತನ್ನ ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜ್ಯ ಶಾಸಕಾಂಗದಲ್ಲಿ ಅಸ್ತಿತ್ವವನ್ನು ಪಡೆಯಲು ಹೆಜ್ಜೆ ಹಾಕುತ್ತಿದೆ. ಚುನಾವಣೆ ಬಗ್ಗೆ ಈಟಿವಿ ಭಾರತದ ಸಂಪಾದಕ ಬಿಲಾಲ್​ ಭಟ್​​​ ವಿಶ್ಲೇಷಣೆ ಇಲ್ಲಿದೆ.

Gujrat elections
ಗುಜರಾತ್ ಚುನಾವಣೆ

ಗುಜರಾತ್ ಚುನಾವಣೆಯು ದಿನೇ ದಿನೆ ಹೆಚ್ಚು ಆಸಕ್ತಿದಾಯಕವಾಗುತ್ತಿದೆ. ವಿಶೇಷವಾಗಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಾನಗಳು ಹೆಚ್ಚಾದ ಬಳಿಕ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಮುಸ್ಲಿಂ ಭಾವನೆ ಪ್ರತಿನಿಧಿಸುವ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಗುಜರಾತ್‌ನ ತನ್ನ ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜ್ಯ ಶಾಸಕಾಂಗದಲ್ಲಿ ಅಸ್ತಿತ್ವವನ್ನು ಪಡೆಯಲು ಹೆಜ್ಜೆ ಹಾಕುತ್ತಿದೆ. ಎಐಎಂಐಎಂ ಮುಖ್ಯಸ್ಥ ಅಸ್ಸಾದುದ್ದಿನ್ ಓವೈಸಿ ಅವರು ಮುಸ್ಲಿಂ ಮತದಾರರಿರುವ ಕ್ಷೇತ್ರಗಳಲ್ಲಿ 12 ಮಂದಿ ಮುಸ್ಲಿಮರನ್ನು ಕಣಕ್ಕಿಳಿಸಿ ಅಖಾಡಕ್ಕೆ ಧುಮುಕಿದ್ದಾರೆ. ಆದರೆ ಇದು ಬಿಜೆಪಿಗೆ ಗೆಲುವಿಗೆ ದಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಓವೈಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕ್ಷೇತ್ರಗಳಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ಸವಾಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ವಿರೋಧಿ ಮತಗಳ ಬುಟ್ಟಿಗೆ ಎಐಎಂಐಎಂ: ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಯು ರಾಜ್ಯದಲ್ಲಿ ನಿಷ್ಠಾವಂತ ಮತ ಬ್ಯಾಂಕ್​ನ್ನು ಹೊಂದಿದೆ. ಬಿಜೆಪಿಯೇತರ ಮತದಾರರಿಂದ ಮತಗಳನ್ನು ಪಡೆಯುವ ಕಾಂಗ್ರೆಸ್ ಮತ್ತು ಎಎಪಿಗೆ ಪ್ರತಿಕೂಲವಾದ ವಾತಾವರಣವನ್ನು ಮೋದಿ- ಶಾ ಜೋಡಿ ನಿರ್ಮಾಣ ಮಾಡಿದೆ. ಬಿಜೆಪಿ ವಿರೋಧಿ ಎಂದು ಗುರುತಿಸಲ್ಪಟ್ಟಿರುವ ಗುಜರಾತ್‌ನ ಮುಸ್ಲಿಮರು ಯಾವಾಗಲೂ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಬೇರೆ ಆಯ್ಕೆಗಳು ಇದ್ದು ಇದರಿಂದ ಮುಸ್ಲಿಂ ಮತಗಳಲ್ಲಿ ಭಾರಿ ವಿಭಜನೆಗೆ ಕಾರಣವಾಗಬಹುದು.

ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರದ ಉಪಚುನಾವಣೆಯಲ್ಲಿ ಎಐಎಂಐಎಂ ವಿರೋಧ ಪಕ್ಷದ ಅದೃಷ್ಟವನ್ನು ಹೇಗೆ ತಲೆಕೆಳಗೆ ಮಾಡಿದೆ ಎಂಬುದಕ್ಕೆ ಸ್ಪಷ್ಟ ಉದಾರಹಣೆ ಆಗಿದೆ. ಬಿಜೆಪಿ ಮತ್ತು ಆರ್‌ಜೆಡಿ ಸುಮಾರು 1794 ಮತಗಳ ವ್ಯತ್ಯಾಸವನ್ನು ಮಾತ್ರವೇ ಹೊಂದಿತ್ತು. ಆದರೆ ಎಐಎಂಐಎಂ ಸುಮಾರು 12,214 ಆರ್‌ಜೆಡಿ ಮತಗಳನ್ನು ಕಸಿದುಕೊಂಡು ಅದರ ಸೋಲಿಗೆ ಕಾರಣವಾಗಿತ್ತು.

ಕಣಕ್ಕಿಳಿಸದೇ ಇದ್ದಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು:ಓವೈಸಿ ಅಬ್ದುಸ್ ಸಲಾಂ ಅವರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸದೇ ಇರದಿದ್ದರೆ, ಆರ್‌ಜೆಡಿ ಗೋಪಾಲಗಂಜ್ ಕ್ಷೇತ್ರವನ್ನು ಸುಮಾರು 10,000 ಮತಗಳ ಅಂತರದಿಂದ ಗೆಲ್ಲುತ್ತಿತ್ತು. ಅದೇ ರೀತಿ, ಅಹಮದಾಬಾದ್‌ನ ಜಮಾಲ್‌ಪುರ್ - ಖಾಡಿಯಾ ಕ್ಷೇತ್ರವು ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರಕ್ಕಿಂತ ಭಿನ್ನವಾಗಿಲ್ಲ. ಇದೇ ರೀತಿ, ಎಐಎಂಐಎಂ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳಿಗೆ ತೊಂದರೆಯಾಗಲಿದೆ. ಮತ್ತದೇ ಪಕ್ಕಾ ಉದಾಹರಣೆ ಬಿಹಾರ ಉಪ ಚುನಾವಣೆ ಫಲಿತಾಂಶ.

ಖಾಡಿಯಾದಲ್ಲಿ ಈ ಸಮುದಾಯದವರ ಮತಗಳೇ ನಿರ್ಣಾಯಕ:ಜಮಾಲ್ಪುರ - ಖಾಡಿಯಾ ಕ್ಷೇತ್ರದಲ್ಲಿ ಮುಸ್ಲಿಮರ ಛಾಪಿ ಸಮುದಯದ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಇಮ್ರಾನ್ ಖೇಡಾವಾಲಾ ಮತ್ತು ಸಬೀರ್ ಕಬ್ಲಿವಾಲಾ ಅವರು ಒಂದೇ ಸಮುದಾಯದ ಇಬ್ಬರು ಅಭ್ಯರ್ಥಿಗಳಾಗಿದ್ದಾರೆ. ಎಐಎಂಐಎಂ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಮ್ರಾನ್ ಅವರು ಜಮಾಲ್ಪುರ್ - ಖಾಡಿಯಾದ ಹಾಲಿ ಶಾಸಕರಾಗಿದ್ದಾರೆ. ಸಬೀರ್ ಓವೈಸಿ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾರೆ.

ಚಾಪಿ ಸಮುದಾಯದಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಲು ಸರ್ವಾನುಮತದಿಂದ ನಿರ್ಧರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇಬ್ಬರೂ ಅಭ್ಯರ್ಥಿಗಳು ಚಾಪಿಗಳಾಗಿರುವುದರಿಂದ ಮತದಾರರು ಗೊಂದಲಕ್ಕೀಡಗಬಹುದು, ಇದರಿಂದಾಗಿ ಬಿಜೆಪಿಗೆ ಲಾಭವಾಗಬಹುದು.

ಓವೈಸಿ ಬಿಜೆಪಿಯ ಬಿ ಟೀಮ್ ಆಗಿದ್ದು, ಅವರು ಕಣಕ್ಕಿಳಿಸುವ ಅಭ್ಯರ್ಥಿಗಳೇ ಬಿಜೆಪಿಗೆ ಹೆಚ್ಚು ಅನುಕೂಲ ಎಂಬ ವಿಚಾರ ಕೆಲ ದಿನಗಳಿಂದ ದೇಶಾದ್ಯಂತ ಚರ್ಚೆಯಲ್ಲಿದೆ. ಬಿಹಾರದ ಉಪಚುನಾವಣೆ ನಂತರ ಎಐಎಂಐಎಂ ನಾಯಕ ಓವೈಸಿ ಅವರ ಖ್ಯಾತಿ ಪ್ರಶ್ನಾರ್ಹವಾಗಿದೆ. ಎಐಎಂಐಎಂ ಅಭ್ಯರ್ಥಿಗಳಿಂದ ಮತಗಳು ವಿಭಜಿಸಲ್ಪಟ್ಟು ಅ ಮತಗಳು ಬಿಜೆಪಿಗೆ ಪಾಲಾಗಿತ್ತು.

ಗುಜರಾತ್​ನಲ್ಲಿ ಓವೈಸಿ ಅವರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾಗ, ಜನರು ಅವರ ವಿರುದ್ಧ ಪ್ರತಿಭಟಿಸಿದ್ದರು. ಪ್ರತಿಭಟನಾಕಾರರು ಅವರನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಏಜೆಂಟ್ ಎಂದು ಕರೆದಿದ್ದೂ ಇದೆ.

ಬಾಪುನಗರದಿಂದ ಅಭ್ಯರ್ಥಿ ಹಿಂಪಡೆಯಲು ಓವೈಸಿ ನಿರ್ಧಾರ:ಬಾಪುನಗರ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯಲು ಓವೈಸಿ ನಿರ್ಧರಿಸಿದ್ದಾರೆ. ಬಾಪುನಗರ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿ ಹಿಮ್ಮತ್ ಸಿಂಗ್ ಅವರಿಗೆ ಬಿಟ್ಟುಕೊಟ್ಟು ಇಡೀ ಕ್ಷೇತ್ರದಲ್ಲಿ ಶೇ.16ರಷ್ಟು ಮುಸ್ಲಿಂ ಮತಗಳು ಇರುವ ಕಾರಣ ಡ್ಯಾಮೇಜ್ ಕಂಟ್ರೋಲ್ ಮಾಡಲಾಗಿದೆಯೇ ಅಥವಾ ಉತ್ತಮವಾಗಿ ಯೋಚಿಸಿದ ಕಾರ್ಯತಂತ್ರದ ಭಾಗವಾಗಿದೆಯೇ ಎಂಬುದನ್ನು ನೋಡಬೇಕಾಗಿದೆ. ಅಹ್ಮದಾಬಾದ್ ಬಾಪುನಗರ ಕ್ಷೇತ್ರದಿಂದ ಎಐಎಂಐಎಂನ ಶಹನವಾಜ್ ಪಠಾಣ್ ನಾಮಪತ್ರ ಹಿಂಪಡೆದಿದ್ದಾರೆ.

ಅದೇ ಸಮಯದಲ್ಲಿ, ಎಸ್‌ಸಿಗೆ ಮೀಸಲಾದ ಸ್ಥಾನವಾದ ಅಹಮದಾಬಾದ್‌ನ ಡ್ಯಾನಿಲಿಮ್ಡಾದ ಕಾಂಗ್ರೆಸ್‌ನ ಹಾಲಿ ಶಾಸಕ ಶೈಲೇಶ್ ಪರ್ಮಾರ್ ವಿರುದ್ಧ ಓವೈಸಿ ಹಿಂದೂ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು, ಓವೈಸಿ ಮುಸ್ಲಿಮರು ಮತ್ತು ದಲಿತ ಎರಡರ ಮೇಲೆಯೂ ಗಮನಹರಿಸುತ್ತಿದ್ದಾರೆ ಎಂಬ ಕಲ್ಪನೆಯನ್ನೂ ಈಗೀಗ ಹುಟ್ಟು ಹಾಕಿದೆ. ಡ್ಯಾನಿಲಿಮ್ಡಾ ಕ್ಷೇತ್ರದಲ್ಲಿ ಎಸ್ಸಿ ಮತ್ತು ಎಸ್ಟಿಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವು ಇದೆ. ಕ್ಷೇತ್ರದಲ್ಲಿ ಒಟ್ಟು 2,39,999 ಮತದಾರರಲ್ಲಿ ಸುಮಾರು 65,760 ಮುಸ್ಲಿಂ ಮತದಾರರಿದ್ದು, ವಿಧಾನಸಭೆಯಲ್ಲಿ ಶೇ.27ರಷ್ಟು ಮತಗಳು ಮುಸ್ಲಿಂರಿಗೆ ಹಂಚಿಕೆಯಾಗಿದೆ.

ಇಡೀ ಗುಜರಾತ್‌ನಲ್ಲಿ ಸರಿಸುಮಾರು ಸುಮಾರು ಶೇ11ರಷ್ಟು ಮುಸ್ಲಿಂ ಮತದಾರರಿದ್ದಾರೆ. ಸುಮಾರು 25 ರಾಜ್ಯ ವಿಧಾನಸಭೆ ಸ್ಥಾನಗಳಲ್ಲಿ ಮುಸ್ಲಿಮ್​ ಜನಸಂಖ್ಯೆಯನ್ನು ಹೊಂದಿವೆ. ಎಐಎಂಐಎಂ ಮುಸ್ಲಿಮರು ಮತ್ತು ದಲಿತರು ಗಣನೀಯ ಸಂಖ್ಯೆಯಲ್ಲಿ ಇರುವ ಮತ್ತು ಹೆಚ್ಚಾಗಿ ನಿರ್ಣಾಯಕವಾಗಿರುವ ಸ್ಥಾನಗಳ ಮೇಲೆ ತಮ್ಮ ಗುರಿಯನ್ನು ಕೇಂದ್ರೀಕರಿಸಿದೆ.

ಜಿಗ್ನೇಶ್​ ಮೇವಾನಿ ವಿರುದ್ಧ ಎಸ್​​​​ಸಿ ಅಭ್ಯರ್ಥಿ ಕಣಕ್ಕೆ: ಕಾಂಗ್ರೆಸ್ ಶಾಸಕ ಮತ್ತು ಖ್ಯಾತ ಕಾರ್ಯಕರ್ತ ಜಿಗ್ನೇಶ್ ಮೇವಾನಿ ವಿರುದ್ಧ ವಡ್ಗಾಮ್ ಕ್ಷೇತ್ರದಲ್ಲಿ ಓವೈಸಿ ಮತ್ತೊಬ್ಬ ಎಸ್‌ಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಬಿಜೆಪಿಗೆ ಸುಲಭವಾದಂತೆ ತೋರುತ್ತದೆ. ಮೇವಾನಿ 2017 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಬಿಜೆಪಿ ವಿರುದ್ಧ ಜಯಗಳಿಸಲು ಜಿಗ್ನೇಶ್​ಗೆ ಸ್ಥಾನವನ್ನು ಬಿಟ್ಟು ಕೊಟ್ಟಿದ್ದವು. ವಡ್ಗಾಮ್ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನವಾಗಿದ್ದು, ಇಲ್ಲಿ ಸುಮಾರು 25 ಪ್ರತಿಶತದಷ್ಟು ಮುಸ್ಲಿಮ್​ ಜನಸಂಖ್ಯೆಯನ್ನು ಹೊಂದಿದೆ.

ಬಿಜೆಪಿ ಎಲ್ಲ 182 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 179 ಕ್ಷೇತ್ರಗಳಲ್ಲಿ ಮಾತ್ರ ತನ್ನ ಸದಸ್ಯರನ್ನು ಕಣಕ್ಕಿಳಿಸುತ್ತಿದೆ. 2017 ರ ಚುನಾವಣೆಯಲ್ಲಿ, 11 ಜಿಲ್ಲೆಗಳನ್ನು ಹೊಂದಿರುವ ಎಲ್ಲ ಸೌರಾಷ್ಟ್ರ ಪ್ರದೇಶದಿಂದ ಬಿಜೆಪಿ ಕೇವಲ 18 ಸ್ಥಾನಗಳನ್ನು ಗೆದ್ದಿತು. ಐತಿಹಾಸಿಕವಾಗಿ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.

ಕಳೆದ ಐದು ವರ್ಷಗಳಲ್ಲಿ ಸೌರಾಷ್ಟ್ರ ಮತ್ತು ಕಛ್‌ನಲ್ಲಿ ಶಾಸಕರಾಗಿದ್ದ ಒಂಬತ್ತು ಮಂದಿ ಕಾಂಗ್ರೆಸ್ಸಿಗರು ಈಗ ಬಿಜೆಪಿಗೆ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಶೇ 49ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇ 41ರಷ್ಟು ಮತ್ತು ಇತರರು ಪಕ್ಷಗಳು ಶೇ 10ರಷ್ಟು ಮತಗಳನ್ನು ಗಳಿಸಿದ್ದವು. ಈ ಬಾರಿ ಕಾಂಗ್ರೆಸ್‌ನ ಮತ ಹಂಚಿಕೆಯು ಎಎಪಿ ಮತ್ತು ಎಐಎಂಐಎಂ ನಡುವೆ ವಿಭಜನೆಯಾಗುವ ಸಾಧ್ಯತೆಯಿದೆ, ಪ್ರತಿಪಕ್ಷಗಳ ಮತಗಳು ಹಂಚಿಕೆಯಾದ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚು ಅನೂಕೂಲವಾಗಲಿದೆ.

ಒಂದು ಕ್ಷೇತ್ರದಲ್ಲಿ 36 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ:ಮತ್ತೊಂದೆಡೆ ಈ ಪ್ರದೇಶದಲ್ಲಿ ಕಾಂಗ್ರೆಸ್ ಕಳಪೆ ಪ್ರಚಾರ ಮಾಡುತ್ತಿದೆ. ಆದರೆ ಪ್ರಧಾನ ಮಂತ್ರಿ ಮೋದಿಯವರು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ತಮಗೆ ಮತ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ. 27 ಪ್ರತಿಶತ ಮುಸ್ಲಿಂ ಮತದಾರರನ್ನು ಹೊಂದಿರುವ ಲಿಂಬಾಯತ್ ಕ್ಷೇತ್ರದಲ್ಲಿ 44 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಮತ್ತು ಅವರಲ್ಲಿ 36 ಮುಸ್ಲಿಮರಿದ್ದು, ಇದರಿಂದ ಮುಸ್ಲಿಂ ಮತದಾರರಲ್ಲಿ ಗೊಂದಲ ಉಂಟಾಗಿದೆ.

ಎಐಎಂಐಎಂ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದರೂ, ಬಾಪುನಗರ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳ ಪೈಕಿ ಇನ್ನೂ 10 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಲೇಖನ:ಬಿಲಾಲ್ ಭಟ್

ಸಂಪಾದಕರು, ಈಟಿವಿ ಭಾರತ

ಇದನ್ನೂ ಓದಿ:ಕಾಂಗ್ರೆಸ್​ ತೆಕ್ಕೆಗೆ ಮರಳಲು ದಲಿತರು ಉತ್ಸುಕ: ಎಐಸಿಸಿ ಸಂಯೋಜಕ ಕೆ. ರಾಜು

ABOUT THE AUTHOR

...view details