ರಿಷಿಕೇಶ್ (ಉತ್ತರಾಖಂಡ): ಗುಡ್ಡಗಾಡಿನ ದುರ್ಗಮ ಪ್ರದೇಶಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಔಷಧಿಗಳನ್ನು ತಲುಪಿಸಲು ಉತ್ತರಾಖಂಡ ರಾಜ್ಯದ ರಿಷಿಕೇಶ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ತಂತ್ರಜ್ಞಾನದ ನೂತನ ಮಾರ್ಗ ಕಂಡುಕೊಂಡಿದೆ. ಡ್ರೋನ್ ಮೂಲಕ ರೋಗಿಗಳಿಗೆ ಔಷಧಿ ತಲುಪಿಸುವ ಯೋಜನೆಯನ್ನು ಗುರುವಾರದಿಂದ ಆರಂಭಿಸಲಾಗಿದೆ. ಮೊದಲ ದಿನವೇ ಸುಮಾರು 40 ಕಿಲೋ ಮೀಟರ್ ದೂರವನ್ನು ಕೇವಲ 29 ನಿಮಿಷಗಳಲ್ಲಿ ಡ್ರೋನ್ ಕ್ರಮಿಸಿ ಔಷಧ ಪೂರೈಸಿತು.
ಡ್ರೋನ್ ಸಹಾಯದಿಂದ ಪರ್ವತದ ಪ್ರದೇಶಗಳಿಗೆ ಔಷಧಿಗಳನ್ನು ತಲುಪಿಸುವ ಕಾರ್ಯಕ್ರಮಕ್ಕೆ ಇಂದು ಏಮ್ಸ್ ನಿರ್ದೇಶಕ ಪ್ರೊ.ಮೀನು ಸಿಂಗ್ ಮತ್ತು ಡ್ರೋನ್ ಕಂಪನಿಯ ಅಧಿಕಾರಿ ಗೌರವ್ ಕುಮಾರ್ ಉದ್ಘಾಟಿಸಿದರು. ಸುಮಾರು ಮೂರು ಕೆಜಿ ತೂಕದ ಔಷಧಿಗಳ ಪ್ಯಾಕೆಟ್ ಅನ್ನು ಡ್ರೋನ್‌ನಲ್ಲಿ ನ್ಯೂ ತೆಹ್ರಿ ಪ್ರದೇಶಕ್ಕೆ ರವಾನಿಸಲಾಯಿತು. ಈ ಮೂಲಕ ಡ್ರೋನ್ನಿಂದ ಔಷಧಿ ರವಾನಿಸಿದ ದೇಶದ ಮೊದಲ ಏಮ್ಸ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಡ್ರೋನ್ ಬಳಸಿದ ದೇಶದ ಮೊದಲ ಏಮ್ಸ್: ಗುಡ್ಡಗಾಡಿನ ನಿವಾಸಿಗಳಿಗೆ ವೈದ್ಯಕೀಯ ಸೌಲಭ್ಯ ತಲುಪಿಸಲು ಏಮ್ಸ್ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಡ್ರೋನ್ ಮೂಲಕ ಔಷಧಗಳನ್ನು ತಲುಪಿಸುವ ಸೇವೆ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ದೇಶದ ಯಾವುದೇ ಏಮ್ಸ್ ಸಂಸ್ಥೆಯಲ್ಲಿ ಅಂತಹ ಸೌಲಭ್ಯ ಲಭ್ಯವಿಲ್ಲ. ಔಷಧಿ ಪೂರೈಕೆಗೆ ಡ್ರೋನ್ ಬಳಕೆ ಮಾಡಿದ ದೇಶದ ಮೊದಲ ಏಮ್ಸ್ ಆಗಿದೆ ಎಂದು ಮೀನು ಸಿಂಗ್ ತಿಳಿಸಿದರು.
ಈಗಾಗಲೇ ರಸ್ತೆ ಮಾರ್ಗವನ್ನು ಬಳಸಿ ಔಷಧಿಗಳು ಮತ್ತು ಇತರ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ದುರ್ಗಮ ರಸ್ತೆಗಳಿಂದ ಅನೇಕ ಪ್ರದೇಶಗಳಿಗೆ ತಲುವುದು ಕಷ್ಟ ಸಾಧ್ಯ. ಅಲ್ಲದೇ, ಕೆಲವೊಮ್ಮೆ ರಸ್ತೆಯ ಮೂಲಕ ಔಷಧಿಗಳನ್ನು ತಲುಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಡ್ರೋನ್‌ಗಳ ಮೂಲಕ ಔಷಧಿಗಳನ್ನು ಕಲುಪಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅವರು ವಿವರಿಸಿದರು.