ಕರ್ನಾಟಕ

karnataka

ETV Bharat / bharat

26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯ ಭ್ರೂಣದಲ್ಲಿನ ಅಸಹಜತೆ ಬಗ್ಗೆ ಪರೀಕ್ಷಿಸಲು ಏಮ್ಸ್​ಗೆ ಸುಪ್ರೀಂ ಕೋರ್ಟ್ ಸೂಚನೆ - ಡಿವೈ ಚಂದ್ರಚೂಡ್

26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯಾಗಿರುವ ವಿವಾಹಿತ ಮಹಿಳೆಯ ಭ್ರೂಣದಲ್ಲಿ ಏನಾದರೂ ಅಸಹಜತೆ ಇದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ನವದೆಹಲಿಯ ಏಮ್ಸ್​ ವೈದ್ಯಕೀಯ ಮಂಡಳಿಗೆ ಸೂಚನೆ ನೀಡಿದೆ.

26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯಾದ ಮಹಿಳೆಯ ಭ್ರೂಣದಲ್ಲಿನ ಅಸಹಜತೆ ಬಗ್ಗೆ ಪರೀಕ್ಷಿಸಲು ಏಮ್ಸ್​ಗೆ ಸುಪ್ರೀಂ ಸೂಚನೆ
aiims-medical-board-to-examine-if-there-is-any-abnormality-in-the-foetus-also-health-status-of-pregnant-woman-says-sc-in-abortion-case

By ETV Bharat Karnataka Team

Published : Oct 13, 2023, 4:17 PM IST

ನವದೆಹಲಿ:26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯಾಗಿರುವ ವಿವಾಹಿತ ಮಹಿಳೆಯ ಭ್ರೂಣದಲ್ಲಿ ಏನಾದರೂ ಅಸಹಜತೆ ಕಂಡುಬರುತ್ತದೆಯೇ ಎಂದು ಪರೀಕ್ಷಿಸಲು ನವದೆಹಲಿಯ ಏಮ್ಸ್​ ವೈದ್ಯಕೀಯ ಮಂಡಳಿಗೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಸೂಚಿಸಿತು. ಅಲ್ಲದೇ, ಪ್ರಸವಾನಂತರದ ಖಿನ್ನತೆ ಮತ್ತು ಮನೋರೋಗದಿಂದ ಬಳಲುತ್ತಿರುವ ಮಹಿಳೆಯ ಆರೋಗ್ಯ ಸ್ಥಿತಿಯನ್ನೂ ಪರೀಕ್ಷಿಸಲು ನಿರ್ದೇಶನ ನೀಡಲಾಗಿದೆ.

ವಿವಾಹಿತ ಮಹಿಳೆಯೊಬ್ಬರಿಗೆ 26 ವಾರಗಳ ಗರ್ಭಪಾತಕ್ಕೆ ಅನುಮತಿ ಕುರಿತಾದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಏಮ್ಸ್​​ಗೆ ಈ ಸೂಚನೆ ನೀಡಿದೆ. ಮಹಿಳೆಯ ಪರ ವಕೀಲ ವಕೀಲ ಅಮಿತ್ ಮಿಶ್ರಾ, 2022ರ ಅಕ್ಟೋಬರ್ 10ರಿಂದ ಪ್ರಸವಾನಂತರದ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಅರ್ಜಿದಾರರ ಔಷಧಿ ಪಟ್ಟಿ ಸಲ್ಲಿಸಿದರು. ಆದರೆ, ಆಗ ''ಕೈ ಬರಹದ ಪ್ರಿಸ್ಕ್ರಿಪ್ಷನ್ ಔಷಧಿಗಳು ಕಾಯಿಲೆಯ ಸ್ವರೂಪವನ್ನು ನಿರ್ದಿಷ್ಟವಾಗಿ ತಿಳಿಸಲ್ಲ. ಎಲ್ಲ ಪ್ರಿಸ್ಕ್ರಿಪ್ಷನ್​ಗಳು ಕೂಡ ಅನಾರೋಗ್ಯದ ಸ್ವರೂಪದ ಬಗ್ಗೆ ಮೌನವಾಗಿರುತ್ತವೆ'' ಎಂದು ಪೀಠ ಹೇಳಿತು.

ವೈದ್ಯಕೀಯ ಗರ್ಭಪಾತ ಕಾಯ್ದೆಗೆ ಸಂಬಂಧಿಸಿದಂತೆ ಸಿಜೆಐ, ''ಭ್ರೂಣವು ಯಾವುದೇ ಅಸಹಜತೆಯಿಂದ ಬಳಲುತ್ತಿದೆಯೇ? ಮತ್ತು ಗರ್ಭಾವಸ್ಥೆಯ ಪೂರ್ಣಾವಧಿಯ ಮುಂದುವರಿಕೆಗೆ ಶಿಫಾರಸು ಮಾಡಲಾದ ಔಷಧಿಗಳಿಂದ ಅಪಾಯಕ್ಕೆ ಒಳಗಾಗುತ್ತದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿವೆಯೇ ಎಂಬ ಕುರಿತು ಏಮ್ಸ್​ನ ವೈದ್ಯಕೀಯ ಸಲಹೆ ಪಡೆಯುವ ಅಗತ್ಯವಿದೆ'' ಎಂದು ತಿಳಿಸಿದರು. ಇದೇ ವೇಳೆ, ''ಭ್ರೂಣವು ಸಾಮಾನ್ಯವಾಗಿದೆ'' ಎಂಬ ಏಮ್ಸ್​ನ ಹಿಂದಿನ ವರದಿಯ ಅಂಶವನ್ನೂ ಗಮನಿಸಿದ ಸುಪ್ರೀಂ, ''ಈ ವಿಷಯದ ಸಂದೇಹವನ್ನು ಮೀರಿ ಹೆಚ್ಚಿನ ವರದಿ ಸಲ್ಲಿಸಬಹುದು'' ಎಂದು ತಿಳಿಸಿತು.

''ಅರ್ಜಿದಾರರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ತಮ್ಮದೇ ಆದ ಸ್ವತಂತ್ರ ಮೌಲ್ಯಮಾಪನ ಕೈಗೊಳ್ಳಲು ಏಮ್ಸ್​ಗೆ ಸ್ವಾತಂತ್ರ್ಯವಿದೆ. ಇಂದೇ ಏಮ್ಸ್ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಬೇಕು'' ಎಂದು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತು. ಬಳಿಕ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಮುಂದೂಡಲಾಯಿತು.

ಅಕ್ಟೋಬರ್ 9ರಂದು ಎರಡು ಮಕ್ಕಳ ತಾಯಿಯಾದ ಅರ್ಜಿದಾರ ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಲ್ಲದೇ, ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿ ಆಕೆ ಇಲ್ಲ ಎಂಬುವುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್​ ವೈದ್ಯಕೀಯ ಗರ್ಭಪಾತಕ್ಕೆ ಮುಂದುವರಿಯಲು ಅನುಮತಿ ನೀಡಿತ್ತು. ಆದರೆ, ಈ ಆದೇಶ ಹಿಂಪಡೆಯುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯುತ್ತಿದೆ.

ಬುಧವಾರ, ಮಹಿಳಾ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠವು ವಿವಾಹಿತ ಮಹಿಳೆಯ 26 ವಾರಗಳ ಗರ್ಭಧಾರಣೆಯ ಮುಕ್ತಾಯಕ್ಕೆ ಅನುಮತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿತ್ತು. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಉನ್ನತ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ಬಂದಿದೆ. ಗುರುವಾರದ ವಿಚಾರಣೆ ವೇಳೆ, 26 ವಾರಗಳ ಗರ್ಭಿಣಿ ಮಹಿಳೆಗೆ ಗರ್ಭಾವಸ್ಥೆಯನ್ನು ಕೊನೆಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಜೊತೆಗೆ ಹುಟ್ಟಲಿರುವ ಮಗುವಿನ ಹಕ್ಕುಗಳೂ ಇವೆ. ಮಗು ಯಾವುದೇ ವಿರೂಪಗಳೊಂದಿಗೆ ಜನಿಸದಂತೆ ಇನ್ನೂ ಕೆಲವು ವಾರಗಳವರೆಗೆ ಗರ್ಭಧರಿಸಲು ಮಹಿಳೆಗೆ ಮನವಿ ಮಾಡಿತ್ತು.

ಇದನ್ನೂ ಓದಿ:ಮಗುವಿಗೂ ಜನಿಸುವ ಹಕ್ಕಿದೆ, ಕಾನೂನಿನಡಿ ಕೊಲ್ಲಲು ಸಾಧ್ಯವಿಲ್ಲ: ಗರ್ಭಪಾತ ಕೇಸಲ್ಲಿ ಸುಪ್ರೀಂ ಕೋರ್ಟ್​ ಅಭಿಮತ

ABOUT THE AUTHOR

...view details