ಚೆನ್ನೈ(ತಮಿಳುನಾಡು) :ಐಐಟಿ-ಮದ್ರಾಸ್ ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಬೇಕು ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (ಎಐಡಿಡಬ್ಲೂಎ) ಶನಿವಾರ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಎಐಡಿಡಬ್ಲೂಎ ಪ್ರಧಾನ ಕಾರ್ಯದರ್ಶಿ ಪಿ.ಸುಗಂತಿ, ಪಶ್ಚಿಮ ಬಂಗಾಳದ ದಲಿತ ವಿದ್ಯಾರ್ಥಿನಿ ಐಐಟಿ-ಎಂನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಹೆಚ್‌ಡಿ ಸ್ಕಾಲರ್ ಆಗಿದ್ದಾರೆ. ಎರಡು ವರ್ಷಗಳಿಂದ ಆಕೆಯ ನಾಲ್ವರು ಸಹಪಾಠಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು.
"ಅಪರಾಧಿಗಳು ಲೈಂಗಿಕ ದೌರ್ಜನ್ಯವನ್ನು ಚಿತ್ರೀಕರಿಸಿದ್ದಾರೆ ಮತ್ತು ಅವರು ಸಂತ್ರಸ್ತೆಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದ್ದರು. ಕಳೆದ ಎರಡು ವರ್ಷಗಳಿಂದ ಹಲವಾರು ಸಂದರ್ಭಗಳಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆ ಘಟನೆಯ ಬಗ್ಗೆ ಪ್ರೊಫೆಸರ್ ಎಡಮನ ಪ್ರಸಾದ್ ಅವರಿಗೆ ದೂರು ನೀಡಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಆರೋಪಿಸಿದರು.
2020ರಲ್ಲಿ ಐಐಟಿ ಕ್ಯಾಂಪಸ್‌ನಲ್ಲಿರುವ ವಿಚಾರಣಾ ಸಮಿತಿಗೆ ದೂರು ನೀಡಿದ ನಂತರವೂ ಐಐಟಿ-ಎಂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಸಂತ್ರಸ್ತ ವಿದ್ಯಾರ್ಥಿನಿ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಘಟನೆಯ ಬಗ್ಗೆ ಅವರು ಮಾ.2021ರಲ್ಲಿ ಮೈಲಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಅವರು ಯಾವುದೇ ಕ್ರಮಕೈಗೊಂಡಿಲ್ಲ.
ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ, ಐಐಟಿ-ಎಂ ತನ್ನ ಸಂಪೂರ್ಣ ತನಿಖೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಹಾಗಾಗಿ, ಐಐಟಿ-ಎಂ ಆಂತರಿಕ ದೂರು ಸಮಿತಿಯು ತನ್ನ ಸಂಪೂರ್ಣ ವರದಿಯನ್ನು ತಕ್ಷಣವೇ ಸಲ್ಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ರಾಜ್ಯ(ತಮಿಳು ನಾಡು) ಸರ್ಕಾರ ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಿ ಕೂಡಲೇ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಿ.ಸುಗಂತಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದೇ, ಕಾಶ್ಮೀರದಲ್ಲಿ ಶಾಂತಿ ಅಸಾಧ್ಯ : ಮೆಹಬೂಬಾ