ಚಂಡೀಗಢ: ಏಡ್ಸ್ ಕಾಯಿಲೆ ಕುರಿತು ಜಾಗೃತಿ ಮತ್ತು ರೋಗದ ಬಗ್ಗೆ ಇರುವ ಅಸ್ಪೃಶ್ಯತೆಯ ಕಲ್ಪನೆಗಳ ಕುರಿತು ಅರಿವು ಮೂಡಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಏಡ್ಸ್ ಇತರೆ ಕಾಯಿಲೆಗಳಿಂದ ಭಿನ್ನ, ಮತ್ತು ಇದಕ್ಕೆ ಸೂಕ್ತ ಚಿಕಿತ್ಸೆ ಎಲ್ಲೆಡೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಲವು ದಶಕಗಳಿಂದಲೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಸ್ಪತ್ರೆಗಳು, ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜು ಹೀಗೆ ಎಲ್ಲೆಡೆಗಳಲ್ಲಿ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ. ಈ ನಡುವೆ ಪಂಜಾಬ್‌ನಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಈ ಕುರಿತು ಪಂಜಾಬ್ ಆರೋಗ್ಯ ಸಚಿವ ಡಾ.ಬಲ್ಬೀರ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಕಿಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ. ಇದು ರಾಜ್ಯ ಮಾತ್ರವಲ್ಲ, ದೇಶವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ರಾಜಕೀಯ ಸೇರಿದಂತೆ ಅನೇಕ ಪ್ರಕ್ಷುಬ್ಧತೆಯನ್ನು ಪಂಜಾಜ್ ಎದುರಿಸುತ್ತಿದ್ದು, ಏಡ್ಸ್ ಕೂಡ ಹೊಸ ಸವಾಲಾಗಿದೆ. ಕಳೆದೊಂದು ವರ್ಷದಲ್ಲಿ 10 ಸಾವಿರ ಏಡ್ಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 88 ರೋಗಿಗಳು 15 ವರ್ಷಕ್ಕಿಂತ ಕೆಳಗಿನವರು ಎಂಬುದನ್ನು ಗಮನಿಸಬೇಕು.
ಪ್ರಸ್ತುತ ರಾಜ್ಯದಲ್ಲಿ 2022 ರಿಂದ ಜನವರಿ 2023ರವರೆಗೆ 10,109 ಏಡ್ಸ್ ರೋಗಿಗಳಿದ್ದಾರೆ. ಜವಳಿ ನಗರಿ ಲೂಧಿಯಾನದಲ್ಲಿ ಅಧಿಕ ಅಂದರೆ 1,800 ರೋಗಿಗಳಿದ್ದರೆ, ಭಟಿಂಡಾದಲ್ಲಿ 1,544 ಮಂದಿ ರೋಗಿಗಳಿದ್ದಾರೆ. ಅಮೃತ್ಸರ್ನಲ್ಲಿ 836 ಮಂದಿಗೆ ಎಚ್ಐವಿ ಪಾಸಿಟಿವ್ ಇದ್ದು, ಫರಿದ್ಕೋಟ್ನಲ್ಲಿ 708 ಮಂದಿ ಇದ್ದಾರೆ. ಇನ್ನುಳಿದಂತೆ ಪಟಿಯಾಲದಲ್ಲಿ 795, ತರ್ನ್ ತರಣ್ನಲ್ಲಿ 520 ಮಂದಿ ಎಚ್ಐವಿ ಸೋಂಕಿತರಿರುವ ಮಾಹಿತಿ ಇದೆ.
ಚಿಕ್ಕ ಮಕ್ಕಳಲ್ಲೂ ಏಡ್ಸ್ ಸೋಂಕು: 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 88 ಮಂದಿಗೆ ಸೋಂಕು ತಗುಲಿರುವುದು ಅಚ್ಚರಿ ಮೂಡಿಸಿದೆ. ಇದರಲ್ಲಿ 58 ಮಂದಿ ಬಾಲಕರಿದ್ದರೆ, 32 ಮಂದಿ ಹೆಣ್ಣು ಮಕ್ಕಳು. 10 ಸಾವಿರ ಸೋಂಕಿತರಲ್ಲಿ 1,847 ಮಂದಿ ಮಹಿಳೆಯರಿದ್ದಾರೆ.