ಮುಂಬೈ (ಮಹಾರಾಷ್ಟ್ರ) :ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ(Central Government) ಮೂರು ವಿವಾದಿತ ಕೃಷಿ ಕಾನೂನು(repeal farm laws) ವಾಪಸ್ ಪಡೆದುಕೊಂಡಿದೆ. ಇದಕ್ಕೆ ವಿವಿಧ ಪಕ್ಷದ ನಾಯಕರು ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ.
ಮುಂಬರುವ ಪಂಚರಾಜ್ಯ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ರೀತಿಯಾ ನಿರ್ಧಾರ ಕೈಗೊಂಡಿದೆ ಎಂದು ಅನೇಕ ಮುಖಂಡರು ಹೇಳಿದ್ದಾರೆ. ಇದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್(NCP chief Sharad Pawar), ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಹಾಗೂ ಎಸ್ಪಿಯ ಅಖಿಲೇಶ್ ಯಾದವ್ ಕೂಡ ಸಾಥ್ ನೀಡಿದ್ದಾರೆ.
ಬಿಜೆಪಿಯನ್ನ ಜನ ಬಹಿಷ್ಕರಿಸುತ್ತಿದ್ದಾರೆ : ವಿವಾದಿತ ಕೃಷಿ ಕಾಯ್ದೆ ವಾಪಸ್(farm laws) ಪಡೆದುಕೊಳ್ಳುತ್ತಿದ್ದಂತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಶರದ್ ಪವಾರ್, ಉತ್ತರಪ್ರದೇಶ, ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಲಿನ ಜನರು ಬಿಜೆಪಿ ಬಹಿಷ್ಕಾರ ಮಾಡಲು ಶುರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ರೈತರು ಕಳೆದ 1 ವರ್ಷದಿಂದ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿಯಿತು ಎಂಬುದನ್ನ ನಾವು ಮರೆಯುವಂತಿಲ್ಲ. ಎಲ್ಲ ರಾಜ್ಯಗಳ ಕೃಷಿ ಸಚಿವರ ಸಲಹೆ ಪಡೆದುಕೊಂಡಿರಲಿಲ್ಲ. ಕೇಂದ್ರ ಸರ್ಕಾರ ಯಾವುದೇ ರೀತಿಯ ಚರ್ಚೆ ಮಾಡದೆ ವಿವಾದಿತ ಕೃಷಿ ಕಾಯ್ದೆಗಳನ್ನ ಜಾರಿಗೆ ತಂದಿತ್ತು ಎಂದು ಹೇಳಿದ್ದಾರೆ.
10 ವರ್ಷಗಳ ಕಾಲ ಕೇಂದ್ರ ಕೃಷಿ ಸಚಿವನಾಗಿ ಕೃಷಿ ವಿಷಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಎಲ್ಲ ರಾಜ್ಯದ ಕೃಷಿ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೃಷಿ ಕಾನೂನು ಜಾರಿಗೆ ತಂದಿರುವುದು ಸರಿಯಲ್ಲ ಎಂದರು.
ಮತ ಪಡೆಯಲು ಕಾನೂನುಗಳ ಹಿಂತೆಗೆತ ; ಅಖಿಲೇಶ್ :ಯಾವುದೇ ಕಾರಣಕ್ಕೂ ರೈತರು ಕ್ಷಮಿಸುವುದಿಲ್ಲ. ದೇಶದಲ್ಲಿ ಬಿಜೆಪಿ ಅಳಸಿ ಹಾಕುತ್ತಾರೆ. ಕೇಂದ್ರ ಸರ್ಕಾರಕ್ಕೆ ಚುನಾವಣೆಯ ಭಯವಿದೆ ಎಂದು ಅಖೀಲೇಶ್ ಯಾದವ್(SP Akhilesh Yadav) ಹೇಳಿದ್ದಾರೆ. ಮತ ಪಡೆದುಕೊಳ್ಳಲು ಈ ಕಾನೂನು ಹಿಂಪಡೆದುಕೊಳ್ಳಲಾಗಿದೆ. ಚುನಾವಣೆ ನಂತರ ಅಂತಹ ಕಾನೂನು ಮರಳಿ ತಂದರೆ? ಕೇಂದ್ರ ರೈತರ ಬಗ್ಗೆ ಯೋಚಿಸುತ್ತಿಲ್ಲ.