ಚೆನ್ನೈ(ತಮಿಳುನಾಡು):ಚೆನ್ನೈ ಹೈಕೋರ್ಟ್ ನೀಡಿದ ಅನುಮತಿಯ ಮೇರೆಗೆ ನಡೆದ ಎಐಎಡಿಎಂಕೆ ಸಾಮಾನ್ಯ ಸಮಿತಿ ಸಭೆಯಲ್ಲಿಂದು 16 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇದರ ಜೊತೆಗೆ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನಾಗಿ(ಮುಖ್ಯಸ್ಥ) ನೇಮಿಸಲಾಗಿದೆ. ಎಐಎಡಿಎಂಕೆ ಇನ್ನೊಂದು ಬಣದ ನಾಯಕ ಒ.ಪನ್ನೀರಸೆಲ್ವಂ ಹಾಗು ಅವರ ಕೆಲವು ಬೆಂಬಲಿಗರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದೆ.
ಎ.ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ, ಒ.ಪನ್ನೀರಸೆಲ್ವಂ ಉಚ್ಛಾಟನೆ - ಎಐಎಡಿಎಂಕೆ ಸಾಮಾನ್ಯ ಸಮಿತಿ ಸಭೆ ಆರಂಭ
ಜೆ.ಜಯಲಲಿತಾ ಅವರ ನಿಧನದ ಆರು ವರ್ಷಗಳ ತರುವಾಯ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ಎಐಎಡಿಎಂಕೆಯ ಹಂಗಾಮಿ ಮುಖ್ಯಸ್ಥರನ್ನಾಗಿ ಇಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಮೂಲಕ ಎಐಎಡಿಎಂಕೆ ಪಕ್ಷದಲ್ಲಿನ ದ್ವಂದ್ವ ನಾಯಕತ್ವ ನೀತಿಯನ್ನು ಕೊನೆಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಒ.ಪನ್ನೀರಸೆಲ್ವಂ ಸೇರಿದಂತೆ ಕೆಲವು ಬೆಂಬಲಿಗರನ್ನು ಪಕ್ಷ ಉಚ್ಛಾಟಿಸಿದೆ.
ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥರಾದ ಪಳನಿಸ್ವಾಮಿ
16 ನಿರ್ಣಯಗಳು ಹೀಗಿವೆ..
- ಚುನಾವಣೆಯ ಮೂಲಕ ಚುನಾಯಿತರಾದ ಎಐಎಡಿಎಂಕೆ ಪದಾಧಿಕಾರಿಗಳನ್ನು ಅಭಿನಂದಿಸುವುದು.
- ತಂದೆ ಪೆರಿಯಾರ್, ಅಣ್ಣಾ ಮತ್ತು ಜಯಲಲಿತಾ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ.
- ಎಐಎಡಿಎಂಕೆ ಸಂಯೋಜಕ ಮತ್ತು ಸಹ-ಸಂಯೋಜಕರ ದ್ವಂದ್ವ ನಾಯಕತ್ವವನ್ನು ರದ್ದುಗೊಳಿಸಿ ಮತ್ತು ಕೋರ್ ಸದಸ್ಯರು ಆಯ್ಕೆ ಮಾಡುವ ಪ್ರಧಾನ ಕಾರ್ಯದರ್ಶಿ ಹುದ್ದೆಯ ಬಗ್ಗೆ ಚರ್ಚೆ ಮತ್ತು ನಿರ್ಧಾರ.
- ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ರಚನೆ ಕುರಿತು ಚರ್ಚೆ ಮತ್ತು ನಿರ್ಧಾರ.
- ಮುಂಬರುವ ಮಹಾಸಭೆಯಲ್ಲಿಯೇ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲು ವಿನಂತಿ.
- ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಯ ಅಧಿಸೂಚನೆ.
- ಎಐಎಡಿಎಂಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಚರ್ಚೆ ಮತ್ತು ನಿರ್ಧಾರ.
- ದಿ.ಮುಖ್ಯಮಂತ್ರಿ ಎಂಜಿಆರ್, ಜಯಲಲಿತಾ ಅವರ ಆಡಳಿತದ ಸಾಧನೆಗಳು ಮತ್ತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರದ ಐತಿಹಾಸಿಕ ಯಶಸ್ಸುಗಳ ಪ್ರಚಾರ.
- ಎಐಎಡಿಎಂಕೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ರದ್ದುಗೊಳಿಸಿದ್ದಕ್ಕಾಗಿ ಡಿಎಂಕೆ ಸರ್ಕಾರದ ನಿರ್ಣಯಗಳ ಖಂಡನೆ.
- ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಜನವಿರೋಧಿ ಡಿಎಂಕೆ ಸರ್ಕಾರ ನೀತಿಗೆ ಖಂಡನೆ.
- ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾದ ಡಿಎಂಕೆ ಸರ್ಕಾರ ಕ್ರಮಕ್ಕೆ ಖಂಡನೆ.
- ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುವುದು.
- ಶ್ರೀಲಂಕಾ ತಮಿಳರ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದು.
- ಸರ್ಕಾರಿ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಡಿಎಂಕೆ ಸರ್ಕಾರವನ್ನು ಒತ್ತಾಯಿಸುವುದು.
- ನೇಕಾರರ ಸಂಕಷ್ಟಗಳನ್ನು ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದು.
- ಚುನಾವಣಾ ಭರವಸೆಗಳನ್ನು ಈಡೇರಿಸದ ಡಿಎಂಕೆ ಸರ್ಕಾರದ ಕ್ರಮ ಮತ್ತು ರಾಜಕೀಯ ದುರುದ್ದೇಶದಿಂದ ಎಐಎಡಿಎಂಕೆ ಸದಸ್ಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದರ ಬಗ್ಗೆ ಖಂಡನೆ.