ಚೆನ್ನೈ: ಎಐಡಿಎಂಕೆ ಪಕ್ಷದಲ್ಲಿ ಪರಸ್ಪರ ಎದುರಾಳಿ ನಾಯಕರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಒ ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಅಧಿಕಾರಿಗಳು ಸೋಮವಾರ ಬೀಗ ಜಡಿದು ಬಂದ್ ಮಾಡಿದರು. ಹಿರಿಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಎಂಜಿಆರ್ ಮಾಳಿಗೈ (M G R Maaligai) ಹೆಸರಿನ ಎಐಎಡಿಎಂಕೆ ಕಚೇರಿಗೆ ಅಧಿಕಾರಿಗಳು ಬೀಗ ಜಡಿದ ನಂತರ ಆಕ್ರೋಶಗೊಂಡ ಓ. ಪನ್ನೀರಸೆಲ್ವಂ ಬೆಂಬಲಿಗರೊಂದಿಗೆ ಹೊರಬಂದರು. ಕಚೇರಿಗೆ ಬೀಗ ಹಾಕಿರುವುದರ ವಿರುದ್ಧ ನ್ಯಾಯಾಲಯದ ಕದ ತಟ್ಟುವುದಾಗಿ ಅವರು ಹೇಳಿದರು.
ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಅವರಿಗೆ ನಿಷ್ಠರಾಗಿರುವ ಗುಂಪುಗಳ ಮಧ್ಯೆ ಇಂದು ಬೆಳಗ್ಗೆ ಘರ್ಷಣೆ ಉಂಟಾಗಿತ್ತು. ಚೆನ್ನೈನ ಹೊರವಲಯದಲ್ಲಿರುವ ಅವ್ವೈ ಷಣ್ಮುಗಂ ಸಲೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯೊಳಗೆ ಮತ್ತು ಸುತ್ತಮುತ್ತ ಹಿಂಸಾಚಾರ ವಿಧ್ವಂಸಕ ಕೃತ್ಯಗಳು ನಡೆದವು.