ಅಹಮದಾಬಾದ್(ಗುಜರಾತ್):ಗೋದ್ರಾ ಘಟನೆಯ ನಂತರ ಅಹಮದಾಬಾದ್‌ನ ನರೋಡಾದಲ್ಲಿ ಹತ್ಯಾಕಾಂಡ ಭುಗಿಲೆದ್ದಿತ್ತು. ಗಲಭೆಯಲ್ಲಿ 11 ಜನರನ್ನು ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 21 ವರ್ಷಗಳ ಬಳಿಕ ಇಂದು ವಿಶೇಷ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಿದೆ. ಪ್ರಕರಣದಲ್ಲಿ 64 ಜನರ ಮೇಲೆ ಆರೋಪ ಹೊರಿಸಲಾಗಿದೆ.
28 ಫೆಬ್ರವರಿ 2002 ರಂದು ನರೋಡಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ 11 ಜನರನ್ನು ಸಜೀವ ದಹನ ಮಾಡಲಾಗಿತ್ತು. ಬಳಿಕ ಅವರ ಆಸ್ತಿಗಳನ್ನು ಲೂಟಿ ಮಾಡಿ ಸುಟ್ಟು ಹಾಕಲಾಗಿತ್ತು. ಸ್ಥಳದಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಹಂತ ಹಂತವಾಗಿ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ 2008 ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ತನಿಖೆಯನ್ನು ಎಸ್‌ಐಟಿ ತಂಡಕ್ಕೆ ಹಸ್ತಾಂತರಿಸಲಾಗಿತ್ತು.
ಪ್ರಕರಣದಲ್ಲಿ ಒಟ್ಟು 258 ಸಾಕ್ಷಿಗಳಿದ್ದಾರೆ. ಇದರಲ್ಲಿ ನ್ಯಾಯಾಲಯವು 187 ಸಾಕ್ಷಿಗಳ ವಿಚಾರಣೆಯನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಪೂರ್ಣಗೊಳಿಸಿದೆ. ಈ ಪ್ರಕರಣದಲ್ಲಿ ಸರ್ಕಾರ, ಪ್ರಾಸಿಕ್ಯೂಷನ್, ಪ್ರತಿವಾದಿಗಳು 10 ಸಾವಿರ ಪುಟಗಳ ದೋಷಾರೋಪ ಮತ್ತು 100 ಹೇಳಿಕೆಗಳನ್ನು ಉಲ್ಲೇಖಿಸಿದೆ. ಒಟ್ಟು 86 ಆರೋಪಿಗಳನ್ನು ಪೊಲೀಸರು ಮತ್ತು ಎಸ್‌ಐಟಿ ಬಂಧಿಸಿದೆ. ಕೇಸ್ನಲ್ಲಿ ಒಬ್ಬ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ವಿಚಾರಣೆ ವೇಳೆ 17 ಆರೋಪಿಗಳು ಸಾವನ್ನಪ್ಪಿದ್ದರು. ಹೀಗಾಗಿ ಮೃತ ಆರೋಪಿಗಳ ಮೇಲಿನ ಪ್ರಕರಣಗಳನ್ನು ಕೈಬಿಡಲಾಗಿದೆ.