ಪಾಟ್ನಾ(ಬಿಹಾರ):2008ರ ಅಹಮದಾಬಾದ್ ಸರಣಿ ಸ್ಫೋಟದ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿದೆ. 49 ಮಂದಿಯಲ್ಲಿ 38 ಮಂದಿ ಮರಣದಂಡನೆಯನ್ನು ವಿಧಿಸಲಾಗಿದೆ. ಮರಣದಂಡನೆಗೆ ಗುರಿಯಾದವರಲ್ಲಿ ಸ್ಫೋಟದ ರೂವಾರಿಯಾದ ತೌಶಿಫ್ ಪಠಾಣ್ ಕೂಡಾ ಇದ್ದು, ಬಿಹಾರದ ಗಯಾದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದನು.
'ತೌಶಿಫ್ ಪಠಾಣ್ ಸೇರಿದಂತೆ 38 ಭಯೋತ್ಪಾದಕರಿಗೆ ನ್ಯಾಯಾಲಯವು ಮರಣದಂಡನೆಯನ್ನು ಘೋಷಿಸಿದ್ದು, ನಾವು ಜೈಲಿನ ಒಳಗೆ ಮತ್ತು ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ನಾವು ತೌಶಿಫ್ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ' ಎಂದು ಗಯಾ ಕೇಂದ್ರ ಕಾರಾಗೃಹದ ಅಧೀಕ್ಷಕ ವಿಜಯ್ ಕುಮಾರ್ ಅರೋರಾ ಶುಕ್ರವಾರ ಹೇಳಿದ್ದಾರೆ.
ತೀರ್ಪು ಕೇಳಿ ಆಘಾತವಾಗಿತ್ತು:ನ್ಯಾಯಾಲಯವು ಮರಣದಂಡನೆ ಘೋಷಿಸಿದಾಗ,ತೌಶಿಫ್ ಆಘಾತಕ್ಕೆ ಒಳಗಾಗಿದ್ದನು. ವಿಡಿಯೋ ಕಾನ್ಫರೆನ್ಸ್ ಪರದೆಯನ್ನು ನೋಡುತ್ತಲೇ ತನ್ನೊಳಗೇ ಹೇಳಿಕೊಳ್ಳುತ್ತಿದ್ದ, ಕೊಠಡಿಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಆತನ ಧ್ವನಿ ಕೇಳಲು ಸಾಧ್ಯವಾಗಲಿಲ್ಲ ಎಂದು ಅರೋರಾ ಹೇಳಿದ್ದಾರೆ.
ಇನ್ನು ಅಹಮದಾಬಾದ್‌ನಲ್ಲಿ ಸರಣಿ ಸ್ಫೋಟದ ನಂತರ ತೌಶಿಫ್ ಪಠಾಣ್ ಪರಾರಿಯಾಗಿ ಗಯಾದಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದನು. ಗಯಾದಲ್ಲಿರುವ ರಾಜೇಂದ್ರ ಆಶ್ರಮ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದನು ಎಂದು ತಿಳಿದು ಬಂದಿದೆ.
ಉಗ್ರರ ನೇಮಿಸಲು ಸೈಬರ್ ಕೆಫೆ ಬಳಕೆ: ಸ್ಫೋಟದ ಕೆಲವು ತಿಂಗಳ ನಂತರ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಸಂಘಟನೆಗಾಗಿ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಲಾಗಿತ್ತು. ಹೀಗಾಗಿ ಉಗ್ರಗಾಮಿ ಚಟುವಟಿಕೆಯಲ್ಲಿ ಆಸಕ್ತಿ ಇರುವವರನ್ನು ಹುಡುಕಲು ಸೈಬರ್ ಕೆಫೆಗಳಿಗೆ ಹೋಗುತ್ತಿದ್ದನು.
ಆ ಸೈಬರ್ ಕೆಫೆಯನ್ನು ನಡೆಸುತ್ತಿದ್ದ ಅನುರಾಗ್ ಬಸು, ತೌಶಿಫ್ನ ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆಹಚ್ಚಿದ್ದು, ತೌಶಿಫ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಕೊಂಡರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ: 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ
ಪೊಲೀಸರು ಸೆಪ್ಟೆಂಬರ್ 15, 2017ರಂದು ತೌಶಿಫ್ ಪಠಾಣ್ ಅವರನ್ನು ಬಂಧಿಸಿದ್ದರು. ಕೆಲವು ದಿನಗಳ ನಂತರ, ಅಹಮದಾಬಾದ್ ಪೊಲೀಸರು ಗಯಾಗೆ ಆಗಮಿಸಿ, ತೌಶಿಫ್ನನ್ನು ಟ್ರಾನ್ಸಿಟ್ ರಿಮಾಂಡ್‌ಗೆ ತೆಗೆದುಕೊಂಡಿದ್ದರು. 12 ದಿನಗಳ ವಿಚಾರಣೆಯ ನಂತರ, ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸೆಪ್ಟೆಂಬರ್ 27, 2017ರಂದು ಅಹಮದಾಬಾದ್‌ಗೆ ಕರೆದೊಯ್ಯಲಾಯಿತು.
2008ರ ಸರಣಿ ಸ್ಫೋಟದ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ತೌಶಿಫ್ನನ್ನು ಮಾರ್ಚ್ 9, 2020ರಂದು ಗಯಾಗೆ ರವಾನಿಸಲಾಗಿತ್ತು. ಅಂದಿನಿಂದ ತೌಶಿಫ್ ಗಯಾ ಕೇಂದ್ರೀಯ ಕಾರಾಗೃಹದಲ್ಲಿಯೇ ಇದ್ದು, ಈಗ ಮರಣದಂಡನೆಗೆ ಗುರಿಯಾಗಿದ್ದಾನೆ.