ನವದೆಹಲಿ :ಬಹುನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಸಮೀಪಿಸುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದು, ಈ ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯಸಭಾ ಕಾರ್ಯಾಲಯ ತನ್ನ ಸಂಸದರಿಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿದೆ.
ರಾಜ್ಯಸಭೆಯ ಸದಸ್ಯರು ತಮ್ಮಲ್ಲಿರುವ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ಒಳಿತಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಸಂಸದರು ಸಂವಿಧಾನ, ಕಾನೂನು, ಸಂಸದೀಯ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರನ್ನು ಗೌರವಿಸಬೇಕು. ಅವರು ಸಂವಿಧಾನದ ಪೀಠಿಕೆಯಲ್ಲಿ ತಿಳಿಸಲಾದ ಆದರ್ಶಗಳನ್ನು ವಾಸ್ತವಕ್ಕೆ ತರಲು ನಿರಂತರವಾಗಿ ಶ್ರಮಿಸಬೇಕು ಎಂದು ನೀತಿ ಸಂಹಿತೆಯಲ್ಲಿ ಹೇಳಲಾಗಿದೆ.
ವೈಯಕ್ತಿಕ ಮತ್ತು ಸಾರ್ವಜನಿಕ ಹಿತಾಸಕ್ತಿ ಸಂಘರ್ಷ ವೇಳೆ :ಸಂಸತ್ನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಸದಸ್ಯರು ಸಂಸತ್ತಿಗೆ ಅಪಖ್ಯಾತಿ ತರುವ ಮತ್ತು ಅವರ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಯಾವುದನ್ನೂ ಮಾಡಬಾರದು. ಜನರ ಯೋಗಕ್ಷೇಮವನ್ನು ಹೆಚ್ಚಿಸಲು ಸಂಸತ್ತಿನ ಸದಸ್ಯರಾಗಿ ತಮ್ಮ ಸ್ಥಾನವನ್ನು ಬಳಸಿಕೊಳ್ಳಬೇಕು.
ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಅವರಿಗಿರುವ ಸಾರ್ವಜನಿಕ ಜವಾಬ್ದಾರಿಯ ನಡುವೆ ಸಂಘರ್ಷವಿದೆ ಎಂದು ಕಂಡುಕೊಂಡರೆ, ತಮ್ಮ ಖಾಸಗಿ ಹಿತಾಸಕ್ತಿಗಳನ್ನು ಸಾರ್ವಜನಿಕ ಸಂಸ್ಥೆಗಳ ಮೂಲಕ ಬಗೆಹರಿಸಿಕೊಳ್ಳಬೇಕು. ಸದಸ್ಯರು ಯಾವಾಗಲೂ ತಮ್ಮ ಖಾಸಗಿ ಆರ್ಥಿಕ ಹಿತಾಸಕ್ತಿಗಳು ಅಥವಾ ಕುಟುಂಬಸ್ಥರ ಹಿತಾಸಕ್ತಿಗಳು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಂಘರ್ಷಕ್ಕೆ ಬರದಂತೆ ನೋಡಿಕೊಳ್ಳಬೇಕು.
ಯಾವುದೇ ಸಂಘರ್ಷ ಉದ್ಭವಿಸಿದರೆ, ಸಾರ್ವಜನಿಕ ಹಿತಾಸಕ್ತಿಯ ಆಧಾರದಲ್ಲಿ ಆ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದು ನೀತಿ ಸಂಹಿತೆಯಲ್ಲಿ ಹೇಳಲಾಗಿದೆ.
ಸದನದಲ್ಲಿ ಹೇಗಿರಬೇಕು?:ಸದನದಲ್ಲಿ ಯಾವುದೇ ನಿರ್ಣಯ ಮಂಡಿಸಲು-ಮಂಡಿಸದಿರಲು, ಮಸೂದೆಯನ್ನು ಮಂಡಿಸಲು-ಮಂಡಿಸದಿರಲು, ಮತ ಹಾಕಲು-ಮತ ಹಾಕದಿರಲು ಯಾವುದೇ ಶುಲ್ಕ, ಸಂಭಾವನೆ ಅಥವಾ ಪ್ರಯೋಜನವನ್ನು ಯಾರಿಂದಲೂ ನಿರೀಕ್ಷೆ ಮಾಡಬಾರದು, ಸ್ವೀಕರಿಸಬಾರದು.