ನಾಗ್ಪುರ(ಮಹಾರಾಷ್ಟ್ರ):ಸ್ವಾತಂತ್ರ್ಯ ನಂತರ ಕೃಷಿ ಕ್ಷೇತ್ರದಲ್ಲಿನ ಅತಿದೊಡ್ಡ ಸುಧಾರಣೆಗಳಲ್ಲಿ ಒಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರು ಕೃಷಿ ಕಾಯ್ದೆ(ತಿದ್ದುಪಡಿ)ಗಳನ್ನು ಅಂಗೀಕರಿಸಲಾಗಿತ್ತು. ರೈತರ ಸಧೀರ್ಘ ಹೋರಾಟದ ನಂತರ ಇತ್ತೀಚೆಗೆ ಹಿಂಪಡೆಯಲಾಯಿತು. ಇದ್ರಿಂದ ನಾವು ನಿರಾಶೆಗೊಂಡಿಲ್ಲ, ಮುನ್ನುಗ್ಗುತ್ತೇವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿವಾದಿತ ಕೃಷಿ ಕಾಯ್ದೆಗಳ ಕುರಿತು ಈ ರೀತಿಯಾಗಿ ಹೇಳಿಕೆ ನೀಡಿದರು. ರೈತರು ಭಾರತದ ಆರ್ಥಿಕತೆಯ ಬೆನ್ನೆಲುಬು. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗಲೆಲ್ಲ ಅದನ್ನು ಹೋಗಲಾಡಿಸುವಲ್ಲಿ ಕೃಷಿ ಕ್ಷೇತ್ರವು ಹೆಚ್ಚಿನ ಸಹಾಯ ಮಾಡಿದೆ. ಇದಕ್ಕೆ ಉದಾಹರಣೆಯೆಂದರೆ, ಕೋವಿಡ್ ಉಲ್ಭಣಗೊಂಡಾಗ ಅತಿ ಹೆಚ್ಚಿನ ಕ್ಷೇತ್ರಗಳು ಕುಂಠಿತಗೊಂಡಿದ್ದವು. ಆದರೆ ಕೃಷಿ ಕ್ಷೇತ್ರ ತನ್ನ ಕಾರ್ಯ ಮುಂದುವರಿಸಿತು.
ಕೃಷಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ರೈತರ ದಾರಿಯನ್ನು ಸುಗಮಗೊಳಿಸುವ ಪ್ರಯತ್ನ ಮಾಡಿದರು. ಕೃಷಿ ವಿಶಾಲ ಕ್ಷೇತ್ರವಾಗಿದ್ದು, ಈ ಹಿಂದೆ ಹೆಚ್ಚಿನ ಬದಲಾವಣೆ ಆಗಿಲ್ಲ. ಈ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಅಗತ್ಯವಿದೆ.