ನವದೆಹಲಿ: ಕೃಷಿತ್ಯಾಜ್ಯ ಸುಡುವ ವಿಷಯದಲ್ಲಿ ಪಂಜಾಬ್ ಹಾಗೂ ಇತರ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ರಾಜ್ಯಗಳ ಹೊಲಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆದೇಶಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆಯೇ ಮುಖ್ಯ ಕಾರಣವಾಗಿದ್ದು, ಈ ವಿಚಾರ ರಾಜಕೀಯ ವಸ್ತುವಾಗಬಾರದು ಎಂದು ಕೋರ್ಟ್ ಹೇಳಿದೆ. ದೆಹಲಿಯಲ್ಲಿನ ಪರಿಸರ ಮಾಲಿನ್ಯ ಜನರ ಕಗ್ಗೊಲೆ ಮಾಡುವುದಕ್ಕಿಂತ ಭಿನ್ನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಕ್ಕಳ ಆರೋಗ್ಯ ಕಾಳಜಿಯನ್ನು ಉಲ್ಲೇಖಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ, ಈ ವಿಷಯ ಎಲ್ಲಾ ಸಮಯದಲ್ಲೂ ರಾಜಕೀಯ ಯುದ್ಧವಾಗಲು ಸಾಧ್ಯವಿಲ್ಲ. ಮತ್ತು ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಒತ್ತಿ ಹೇಳಿತು. ನಾವು ಅದನ್ನು ನಿಲ್ಲಿಸಬೇಕೆಂದು ಬಯಸುತ್ತೇವೆ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂದು ನಮಗೆ ತಿಳಿದಿಲ್ಲ, ಆದರೆ ಅದು ನಿಲ್ಲಬೇಕು. ಇದಕ್ಕಾಗಿ ತಕ್ಷಣವೇ ನೀವು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಬೇಕಿದೆ, ಆದರೆ ಇದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತೋರುತ್ತದೆ ಎಂದು ಅವರು ಹೇಳಿದರು.
ಇದು ನಿರ್ದಿಷ್ಟ ಬೆಳೆಯ ಸಮಯದ ವಿಚಿತ್ರ ಸಮಸ್ಯೆಯಾಗಿದೆ. ಆದರೆ ಈ ವಿಷಯದಲ್ಲಿ ನ್ಯಾಯಾಲಯದ ಗಂಭೀರತೆ ನಿಮಗಿಲ್ಲವಾಗಿದೆ. ಕೃಷಿ ತ್ಯಾಜ್ಯ ಸುಡುವುದನ್ನು ನೀವು ಹೇಗೆ ನಿಲ್ಲಿಸುತ್ತೀರಿ ಎಂಬುದು ನಮಗೆ ಬೇಕಿಲ್ಲ. ಬಲವಂತದಿಂದಲಾದರೂ ಮಾಡಿ ಅಥವಾ ಅದನ್ನು ಪ್ರೋತ್ಸಾಹಕ ಕ್ರಮಗಳಿಂದಾದರೂ ಮಾಡಿ ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ನ್ಯಾಯಮೂರ್ತಿ ಕೌಲ್ ಕಟ್ಟುನಿಟ್ಟಾಗಿ ಸೂಚಿಸಿದರು.