ನವದೆಹಲಿ:ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ಜಾರಿ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ನಮ್ಮ ಸರ್ಕಾರ ಇನ್ನೂ ಸಹ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರೈತರೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಸೂಕ್ತ ಕಾನೂನಿನ ಅಡಿ ದೇಶದಲ್ಲಿ ಜಾರಿಗೆ ತಂದಿರುವ ಈ ಕೃಷಿ ಕಾನೂನುಗಳನ್ನು ಹೊರತುಪಪಡಿಸಿ ರೈತರಿಗೆ ತೊಂದರೆಯಾಗುತ್ತಿರುವ ಬೇರೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ನಾವು ತಯಾರಿದ್ದೇವೆ.
ಇದನ್ನೂ ಓದಿ:ಕೊರೊನಾ ಕಾಲದಲ್ಲಿ ಅನ್ನದಾತರಿಗೆ ಸಿಹಿ ಸುದ್ದಿ: ಎಲ್ಲಾ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ಈ ತರ್ಕಬದ್ಧವಲ್ಲದ ಹೋರಾಟವನ್ನು ರೈತರು ಕೈಬಿಡಬೇಕು. ಇದನ್ನು ಬಿಟ್ಟು ಬೇರೆ ಯಾವುದೇ ವಿಚಾರಗಳ ಕುರಿತು ಅವರೊಂದಿಗೆ ಚರ್ಚೆ ಮಾಡಲು ಯಾವತ್ತೂ ಹಿಂದೆ ಸರಿಯುವುದಿಲ್ಲ. ಪ್ರತಿಭಟನಾ ರೈತರು ಸರ್ಕಾರದ ನಿಲುವನ್ನು ಅರ್ಥೈಸಿಕೊಳ್ಳಬೇಕು ಎಂದಿದ್ದಾರೆ.
ಪ್ರತಿಭಟನಾ ರೈತರೊಂದಿಗೆ ಕೇಂದ್ರ ಸರ್ಕಾರ ಈಗಾಗಲೇ 11 ಸುತ್ತಿನ ಮಾತುಕತೆ ನಡೆಸಿದೆ. ಜನವರಿ 22 ರಂದು ಕೊನೆಯ ಸುತ್ತಿನ ಮಾತುಕತೆ ನಡೆದಿತ್ತು. ಅದಕ್ಕೂ ಸಹ ರೈತರು ತಮ್ಮ ಒಪ್ಪಿಗೆ ಸೂಚಿಸಿಲ್ಲ. ತಮ್ಮ ಪ್ರತಿಭಟನೆಯನ್ನು ಮುಂದುವರೆಸುವ ಮೂಲಕ ದೇಶದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿದ್ದಾರೆ.
ಜನವರಿ 26 ರಂದು ನಡೆದ ವ್ಯಾಪಕ ಹಿಂಸಾಚಾರದ ನಂತರ ಮತ್ತೆ ಯಾವುದೇ ಮಾತುಕತೆ ನಡೆಸಿಲ್ಲ. ಪಂಜಾಬ್, ಹರಿಯಾಣ ಮತ್ತು ಇತರ ಈಶಾನ್ಯ ಪ್ರದೇಶದ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀತಿ ಸೇರಿದಂತೆ ರೈತರಿಗೆ ಅನುಕೂಲವಾಗುವಂತಹ ಕಾನೂನು ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಹೋರಾಟ ನಡೆಸಲಾಗುತ್ತಿದೆ.
ಇನ್ನು ಮುಂದಿನ ಆದೇಶದವರೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕಾನೂನುಗಳ ಅನುಷ್ಠಾನವನ್ನು ಸುಪ್ರೀಂಕೋರ್ಟ್ ತಡೆಹಿಡಿದಿದ್ದು ಪರಿಹಾರಗಳನ್ನು ಕಂಡುಹಿಡಿಯಲು ಸಮಿತಿಯನ್ನು ಸಹ ರಚಿಸಿದೆ.
ಇದನ್ನೂ ಓದಿ: ಅಪಪ್ರಚಾರವನ್ನು ನಂಬಬೇಡಿ ; ರೈತರಿಗೆ ಕೃಷಿ ಸಚಿವ ತೋಮರ್ 8 ಪುಟಗಳ ಪತ್ರ
ದೇಶದ ಎಲ್ಲಾ ರಾಜಕೀಯ ಪಕ್ಷಗಳು ಕೃಷಿ ಕಾನೂನುಗಳನ್ನು ಜಾರಿಗೆ ತರಲು ಬಯಸಿದ್ದವು. ಆದರೆ, ಅದು ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಕೆಲವು ಸುಧಾರಣೆಗನ್ನು ಜಾರಿಗೆ ತರಲೆಂದೇ ಈ ದೊಡ್ಡ ಹೆಜ್ಜೆ ಇಟ್ಟಿತು. ಇದರ ಲಾಭವನ್ನು ಹಲವು ರೈತರು ಪಡೆದ ಪಡೆದ ಉದಾಹರಣೆ ಇದೆ.
ಆದರೆ, ಯಾವುದೇ ರಾಜಕೀಯ ಪಕ್ಷದ ನಾಯಕರು ಸದನದಲ್ಲಿ ಈ ಬಗ್ಗೆ ರೈತರ ಮುಖಂಡರಿಗೆ ಉತ್ತರ ನೀಡಿಲ್ಲ. ಸರ್ಕಾರ ದೇಶದ ರೈತರ ಪರವಾಗಿದೆ. ರೈತರನ್ನು ಗೌರವಿಸುತ್ತದೆ. ಆದ್ದರಿಂದ, ಈ ಮೊಂಡುತನ ಬಿಟ್ಟು ರೈತರು ನಮ್ಮ ಜೊತೆ ಚರ್ಚೆಗೆ ಬರಲಿ. ನಾವು ಸದಾ ಸಿದ್ಧ ಎಂದು ಸರ್ಕಾರ ಜಾರಿಗೆ ತಂದ ಕಾನೂನನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಮತ್ತೆ ಪುನರುಚ್ಚರಿಸಿದ್ದಾರೆ.