ಆಗ್ರಾ( ಉತ್ತರಪ್ರದೇಶ):ಉತ್ತರ ಪ್ರದೇಶದ ಆಗ್ರಾದ ಧನೋಲಿ, ಅಜೀಜ್‌ಪುರ ಮತ್ತು ಸಿರೋಲಿ ಗ್ರಾಮಗಳಲ್ಲಿ ರಸ್ತೆ ಮತ್ತು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ 81 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ಪ್ರತಿಭಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿಕಾಸ್ ನಗರದ ನಿವಾಸಿ ರಾಣಿ ದೇವಿ(48) ಮೃತರು. ಇವರ ಪಕ್ಕದಲ್ಲಿ ಮಲಗಿದ್ದ ಇನ್ನೊಬ್ಬ ಮಹಿಳೆಯನ್ನು ಕೀರ್ತಿ ದೇವಿ(85) ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
82 ದಿನಗಳಿಂದ ಸ್ಥಳೀಯರ ಪ್ರತಿಭಟನೆ
ಕಳೆದ 81 ದಿನಗಳಿಂದ ಈ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಣಿ ದೇವಿ ಅವರು ಅ. 13 ರಿಂದ ಸಿರೋಲಿ - ಧನೋಲಿ ರಸ್ತೆಯ ಪ್ರತಿಭಟನಾ ಸ್ಥಳದಲ್ಲಿ ನಿಯಮಿತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರು ತಮ್ಮ 22 ವರ್ಷದ ಮಗ ನೀರಜ್ ಜತೆಗೆ ಸೈಟ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಮೃತರ ಮಗ ನೀರಜ್ ಮಾತನಾಡಿ,'ಪ್ರತಿಭಟನಾ ಸ್ಥಳಕ್ಕೆ ರಾತ್ರಿ ವೇಳೆ ಹೋಗಬೇಡಿ ಎಂದು ನನ್ನ ತಾಯಿಗೆ ಹೇಳುತ್ತಿದ್ದೆ. ಆದರೆ ಅವರು ಹಠ ಹಿಡಿಯುತ್ತಿದ್ದರು. ಭಾನುವಾರ ಬೆಳಗ್ಗೆ ಚಹಾ ನೀಡಲು ಹೋದಾಗ ಅವರು ಎದ್ದಿರಲಿಲ್ಲ. ಅವರ ದೇಹ ಸಂಪೂರ್ಣ ತಣ್ಣಗಾಗಿತ್ತು. ನಾವು ವೈದ್ಯರನ್ನು ಕರೆಯಿಸಿ ತಪಾಸಣೆ ಮಾಡಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನನ್ನ ತಾಯಿಯ ಸಾವಿಗೆ ಜಿಲ್ಲಾಡಳಿತವೇ ಹೊಣೆ ಎಂದು ದೂರಿದರು.
ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
ಪ್ರತಿಭಟನೆಯ ನೇತೃತ್ವ ವಹಿಸಿರುವ ಸಾಮಾಜಿಕ ಕಾರ್ಯಕರ್ತೆ ಸಾವಿತ್ರಿ ಚಹಾರ್ ಮಾತನಾಡಿ, 'ಕಳೆದ ಮೂರು ವರ್ಷಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ, ನೀರಿನ ಅಭಾವ, ಕಳಪೆ ರಸ್ತೆ, ಚರಂಡಿ ಮುಂತಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದೆವು. ಸ್ಥಳೀಯ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರೂ ಇಲ್ಲಿಯವರೆಗೆ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪ್ರಭು ಎನ್.ಸಿಂಗ್ ಮಾತನಾಡಿ, 'ಧನೋಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ 43 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯರ ಬೇಡಿಕೆ ಮೇರೆಗೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ನಾವೂ ಕೆಲಸ ಮಾಡುತ್ತಿದ್ದೇವೆ. ಶಾಶ್ವತ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಸಹಾಯವನ್ನು ಒದಗಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಅನ್ನದಾತನಿಗೆ 50 ಸಾವಿರ ಕೋಟಿ ಕೊಟ್ಟ ಸರ್ಕಾರ... ಈ ವಾರವಿಡೀ ರೈತ ಬಂಧು ಆಚರಣೆ