ಆಗ್ರಾ (ಉತ್ತರಪ್ರದೇಶ) :ಕಾಲ ಬದಲಾಗಿದೆಯಾ..? ಈ ವಿಚಿತ್ರ ಪ್ರಕರಣವನ್ನು ಗಮನಿಸಿದರೆ ಹೀಗೆ ಅನ್ನಿಸದೇ ಇರದು. ಪತಿ ಗುಟ್ಕಾ ತಿಂತಾನೆ, ಸಿಗರೇಟ್ ಸೇದ್ತಾನೆ, ಕುಡಿದು ಬಂದು ಜಗಳ ಕಾಯ್ತಾನೆ ಅಂತೆಲ್ಲಾ ಪತ್ನಿಯರು ದೂರುವುದು ಸಹಜ. ಆದರೆ, ಇಲ್ಲಿ ಇದು ಫುಲ್ ಉಲ್ಟಾ. ಪತ್ನಿ ಗುಟ್ಕಾ ತಿಂದು ಮನೆಯ ಗೋಡೆಗಳ ಮೇಲೆ ಉಗಿಯುತ್ತಾಳೆ. ಆಕೆಯಿಂದ ಬಿಡುಗಡೆ ಕೊಡಿಸಿ ಎಂದು ಪತಿರಾಯ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಎಡತಾಕಿದ್ದಾನೆ. ಇದನ್ನು ಕೇಳಿ ಅಧಿಕಾರಿಗಳಿಗೆ ಅಚ್ಚರಿಯ ಜೊತೆಗೆ ಗೊಳ್ ಎಂದು ನಕ್ಕಿದ್ದಾರೆ.
ಹೌದು, ಉತ್ತರಪ್ರದೇಶದ ಆಗ್ರಾದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ವಿರುದ್ಧ ಪತಿಯೇ ಗುಟ್ಕಾ ತಿನ್ನುವ ಆರೋಪ ಮಾಡಿದ್ದಾನೆ. ವಿಶೇಷ ಎಂದರೆ ಈ ಕೇಸ್ ಎರಡನೇ ಬಾರಿಗೆ ಕೇಂದ್ರದ ಮೆಟ್ಟಿಲೇರಿದೆ. ಮೊದಲ ಬಾರಿ ಸಂಧಾನ ನಡೆಸಲಾಗಿತ್ತು. ಈ ಬಾರಿ ಬಿಕ್ಕಟ್ಟು ಬಿಗಡಾಯಿಸಿದ್ದು, ಪತ್ನಿ ವಿರುದ್ಧ ಒಂದು ನಿರ್ಣಯ ನೀಡಲು ಪತಿ ಕೋರಿದ್ದಾನೆ.
ಪ್ರಕರಣದ ಹಿನ್ನೆಲೆ:ಆಗ್ರಾದ ಹರಿಪರ್ವತ ಪೊಲೀಸ್ ಠಾಣೆಯ ಜೀವನಿ ಮಂಡಿ ನಿವಾಸಿ ಯುವಕನಿಗೆ 8 ತಿಂಗಳ ಹಿಂದಷ್ಟೇ ವಿವಾಹವಾಗಿದೆ. ಸ್ಪುರದ್ರೂಪಿ ಹೆಂಡತಿಗೆ ಗುಟ್ಕಾ ತಿನ್ನುವ ಕೆಟ್ಟ ಚಾಳಿ ಇದೆ ಅಂತ ಗೊತ್ತಿರಲಿಲ್ಲ. ಅದು ಮದುವೆಯಾದ ಎರಡೇ ದಿನದಲ್ಲಿ ಗೊತ್ತಾಗಿದೆ. ಪತಿ ತಿಳಿ ಹೇಳಿ ಗುಟ್ಕಾ ತಿನ್ನುವುದು ಬಿಡಲು ಸೂಚಿಸಿದ್ದಾನೆ. ಆದರೆ, ಚಾಳಿ ಅನ್ನೋದು ಅಷ್ಟು ಸುಲಭವಾಗಿ ಬಿಟ್ಟು ಹೋಗಲ್ಲವಲ್ಲ. ಅಂತೆಯೇ ಮಹಿಳೆ ಗುಟ್ಕಾ ತಿನ್ನೋದು ಮುಂದುವರಿಸಿದ್ದಾಳೆ. ಇದಕ್ಕೆ ಪತಿ ತೀವ್ರ ವಿರೋಧ ವ್ಯಕ್ತಪಡಿಸಿ, ಆಕೆಯನ್ನು ತವರು ಮನೆಗೆ ಅಟ್ಟಿದ್ದ.
ಬಳಿಕ ಆಕೆಯ ಮನೆಯವರು ಸಂಧಾನ ನಡೆಸಿ, ಇನ್ನು ಮುಂದೆ ಹೀಗೆ ಮಾಡಲ್ಲ ಅಂತ ಒಪ್ಪಿಕೊಂಡ ಮೇಲೆ ಮತ್ತೆ ಯುವಕ ತನ್ನ ಹೆಂಡತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದ. ಕೆಲ ದಿನ ಚೆನ್ನಾಗಿಯೇ ಇದ್ದ ಆಕೆ, ಮತ್ತೆ ಗುಟ್ಕಾ ಜಗಿಯಲು ಶುರು ಮಾಡಿದ್ದಳು. ಇದರ ವಿರುದ್ಧ ಪತಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ದೂರು ನೀಡಿದ್ದ. ಅಲ್ಲಿಯೂ ಸಂಧಾನ ನಡೆಸಿ, ಮಹಿಳೆ ಕ್ಷಮೆ ಕೋರಿ ಚಾಳಿ ಬಿಡುವುದಾಗಿ ಒಪ್ಪಿದ್ದಳು.
ಬಿಟ್ಟೆನೆಂದರೂ ಬಿಡದ ಚಾಳಿ:ಅದೇನೆ ಮಾಡಿದರೂ, ಮಹಿಳೆ ಮಾತ್ರ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿದ್ದಳು. ತಾನೇ ಅಂಗಡಿಗೆ ಹೋಗಿ ಗುಟ್ಕಾ ಖರೀದಿ ಮಾಡಿ ತಿನ್ನುತ್ತಿದ್ದಳಂತೆ. ಇದನ್ನು ಕಂಡ ನೆರೆಹೊರೆಯವರು ಆಡಿಕೊಳ್ಳಲು ಶುರು ಮಾಡಿದ್ದಾರೆ. ಇದರಿಂದ ತೀವ್ರ ಬೇಸತ್ತ ಪತಿ ಮಹಾಶಯ ಮತ್ತೆ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿದ್ದಾನೆ. ಏನೇ ಮಾಡಿದರೂ ತನ್ನಾಕೆ ಈ ಗೀಳಿನಿಂದ ಹೊರಬರುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಅಂತ ಕೋರಿದ್ದಾನೆ. ಜೊತೆಗೆ ಗುಟ್ಕಾ ತಿನ್ನುವುದನ್ನು ಬಿಡಲು ಹೇಳಿದರೆ, ತನ್ನನ್ನೇ ಕೆಟ್ಟ ಪದಗಳಿಂದ ನಿಂದಿಸುತ್ತಾಳೆ ಎಂದು ದೂರಿದ್ದಾನೆ.
ಇದನ್ನು ಕೇಳಿದ ಅಧಿಕಾರಿಗಳಿಗೆ ಅಚ್ಚರಿಯೋ ಅಚ್ಚರಿ. ಅಲ್ಲ ಕುಟುಂಬಕ್ಕೆ ಗೌರವ ತರಬೇಕಾದ ಮಹಿಳೆಯೇ ಕೆಟ್ಟ ಚಾಳಿಗೆ ಬಿದ್ದಿದ್ದು, ನಗು ತರಿಸಿದೆ. ಇತ್ತ ಮಹಿಳೆ ಪತಿಯ ವಿರುದ್ಧ ಪ್ರತಿ ದೂರು ನೀಡಿದ್ದಾಳೆ. ತನ್ನನ್ನು ಹಿಂಸಿಸುತ್ತಿದ್ದಾನೆ. ಆತನ ಕುಟುಂಬಸ್ಥರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾಳೆ. ಈ ಕೇಸನ್ನು ಅಧಿಕಾರಿಗಳು ಅದ್ಹೇಗೆ ಸರಿ ಮಾಡ್ತಾರೋ ದೇವರೇ ಬಲ್ಲ.
ಇದನ್ನೂ ಓದಿ:ಪಾಕಿಸ್ತಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹಿಂದೂ ಮಹಿಳೆ; ಇತಿಹಾಸದಲ್ಲೇ ಇದೇ ಮೊದಲು