ಆಗ್ರಾ(ಉತ್ತರಪ್ರದೇಶ):ಮಾತು ಬಾರದ, ಕಿವಿ ಕೇಳದ ವಿಶೇಷ ವ್ಯಕ್ತಿಗಳಿಗೆ ಕೆಲಸ ಸಿಗುವುದು ಕಷ್ಟ. ಆದರೆ, ಇಲ್ಲೊಂದು ರೆಸ್ಟೋರೆಂಟ್ ಮಾಲೀಕ ತನ್ನ ಸಿಬ್ಬಂದಿಯಾಗಿ ಮೂಗ ಮತ್ತು ಕಿವುಡರನ್ನೇ ನೇಮಿಸಿಕೊಂಡಿದ್ದಾರೆ. ಇಲ್ಲಿಗೆ ಬರುವ ಗ್ರಾಹಕರಿಗೆ ಅನುಕೂಲವಾಗಲೆಂದು ಸಂಜ್ಞೆಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದ್ದು, ತಮಗೆ ಬೇಕಾದ ತಿಂಡಿ, ಆಹಾರವನ್ನು ಆರ್ಡರ್ ಮಾಡಬಹುದು.
ಬ್ರೆಡ್ ಆ್ಯಂಡ್ ಮೈಮ್ ಎಂಬ ಹೆಸರಿನ ಈ ಕೆಫೆ ಉತ್ತರಪ್ರದೇಶದ ಆಗ್ರಾದಲ್ಲಿದೆ. ಇದರ ಮಾಲೀಕರಾದ ಡೇವಿಶ್ ವಶಿಷ್ಟ್ ವೃತ್ತಿಯಲ್ಲಿ ಇಂಜಿನಿಯರ್. ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದ ಇವರು ಈ ವಿಶಿಷ್ಟವಾದ ಪ್ರಯೋಗ ನಡೆಸಿದ್ದಾರೆ. ವಿಭಿನ್ನ ಆಲೋಚನೆಯ ಡೇವಿಶ್, ತಮ್ಮ ರೆಸ್ಟೋರೆಂಟ್‌ನಲ್ಲಿ ಕಿವುಡ ಮತ್ತು ಮೂಕರಿಗೆ ನೌಕರಿ ನೀಡಿದ್ದಾರೆ. ಸರ್ವ್ ಮಾಡುವುದರಿಂದ ಹಿಡಿದು ಕ್ಯಾಷಿಯರ್ವರೆಗೂ ಎಲ್ಲರೂ ಇಲ್ಲಿ ವಿಶಿಷ್ಟ ಸಾಮರ್ಥ್ಯವುಳ್ಳವರೇ. 2021ರಲ್ಲಿ ಈ ರೆಸ್ಟೋರೆಂಟ್ ಕಾರ್ಯಾರಂಭಿಸಿದೆ.
ಕೋವಿಡ್ ಕಾರಣವಂತೆ:ಡೇವಿಶ್ ತಮ್ಮ ಪರಿಕಲ್ಪನೆಯ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿ, "ಮೊದಲು ಸಹಜ ಸಿಬ್ಬಂದಿಯಿಂದ ಕೂಡಿದ್ದ ರೆಸ್ಟೋರೆಂಟ್ ಕೋವಿಡ್ ವೇಳೆ ಬಾಗಿಲು ಹಾಕಿತ್ತು. ಬಳಿಕ ಪುನಾರಂಭವಾದಾಗ ಸಿಬ್ಬಂದಿ ಕೈಕೊಟ್ಟರು. ಜಾಹಿದ್ ಎಂಬ ಕಿವುಡ ಮತ್ತು ಮೂಕ ಯುವಕ ಕೆಲಸ ಕೇಳಲು ನನ್ನ ಬಳಿ ಬಂದ. ನಾನು ಆತನಿಗೆ ಕೆಲಸ ನೀಡಿದೆ. ಸಂಕೇತ ಭಾಷೆಗಳ ಮೂಲಕ ಆತ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದ. ಇದರಿಂದ ನಾನು ಪ್ರಭಾವಿತನಾಗಿ ರೆಸ್ಟೋರೆಂಟ್ನ ಎಲ್ಲ ಸಿಬ್ಬಂದಿಯಾಗಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನೇ ಆಯ್ದುಕೊಂಡೆ" ಎಂದು ತಿಳಿಸಿದರು.